ದುಬೈ: ಇಂದಿನಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದೆ. ಅಫ್ಗಾನಿಸ್ತಾನ ತಂಡವು ಅಬುಧಾಬಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಂಗ್ಕಾಂಗ್ ತಂಡವನ್ನು ಎದುರಿಸಲಿದೆ. ದುಬೈನಲ್ಲಿ ಬುಧವಾರ ನಡೆಯುವ ಪಂದ್ಯದಲ್ಲಿ ಭಾರತ ಯುಎಇ ತಂಡವನ್ನು ಎದುರಿಸಲಿದೆ.ಸೂರ್ಯಕುಮಾರ್ ಯಾದವ್ ನೇತೃತ್ವದ
ತಂಡ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಫೇವರಿಟ್ ಆಗಿದೆ. ಆದುದರಿಂದಲೇ ಭಾರತ ತಂಡದ ಮೇಲೆ ನಿರೀಕ್ಷೆ ಹೆಚ್ಚಿದೆ. ಭಾರತ ಈ ಹಿಂದೆ ಎಂಟು ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಫೆಬ್ರುವರಿ–ಮಾರ್ಚ್ನ ವಿಶ್ವಕಪ್ ಆರಂಭಕ್ಕೆ ಮುನ್ನ, ಭಾರತ ತಂಡಕ್ಕೆ ಮುನ್ನ ಆತ್ಮ ವಿಶ್ವಾಸ ಹೆಚ್ಚಲು ಇಲ್ಲಿನ ಗೆಲುವು ಅಗತ್ಯ.
ಸೂರ್ಯ ನಾಯಕರಾಗಿ ಶೇ 80 ವಿಜಯದ ದಾಖಲೆ ಹೊಂದಿದ್ದಾರೆ. ಈಗ ಅವರ ತಂಡದಲ್ಲಿ ಉಪನಾಯಕ ಶುಭಮನ್ ಗಿಲ್ ಇದ್ದಾರೆ. ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಹೊಸಬರಿಂದ ಕೂಡಿದೆ. ಶ್ರೀಲಂಕಾ ತಂಡ ಪರಿವರ್ತನೆಯ ಹಂತದಲ್ಲಿದೆ.
ಪಾಕ್ ತಂಡ, ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಟ್ಟಿದೆ. ತಂಡದ ಯಶಸ್ಸು, ಶಹೀನ್ ಶಾ ಅಫ್ರೀದಿ, ಹ್ಯಾರಿಸ್ ರವೂಫ್ ಮತ್ತು ಹಸನ್ ಅಲಿ ಅವರ ಬೌಲಿಂಗ್ ಪಡೆಯ ಮೇಲಿದೆ.
ತ್ರಿಕೋನ ಸರಣಿಯ ಫೈನಲ್ನಲ್ಲಿ ಭಾನುವಾರ 75 ರನ್ಗಳಿಂದ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿರುವ ಕಾರಣ ಪಾಕಿಸ್ತಾನ ಸ್ವಲ್ಪ ಉತ್ಸಾಹದಲ್ಲಿದೆ. ಶಾರ್ಜಾದ ಮಂದಗತಿಯ ಟ್ರ್ಯಾಕ್ನಲ್ಲಿ ಪಾಕ್ ಸ್ಪಿನ್ನರ್ಗಳು ಕೈಚಳಕ ತೋರಿದ್ದರು.ಚರಿತ್ ಅಸಲಂಕಾ ನೇತೃತ್ವದಲ್ಲಿ ಶ್ರೀಲಂಕಾ ಕಣಕ್ಕಿಳಿಯಲಿದೆ.
ಆತಿಥೇಯ ಯುಎಇ, ಹಾಂಗ್ಕಾಂಗ್ ತಂಡ ಒಮಾನ್ ತಂಡಗಳಿಗೆ ಇಲ್ಲಿ ಅನುಭವ ಸಂಪಾದಿಸುವ ಅವಕಾಶ ದೊರೆಯಲಿದೆ.
ಪಂದ್ಯ ಆರಂಭ ರಾತ್ರಿ 8ರಿಂದ.












