ಅಬುಧಾಬಿ: ಸೆದಿಕುಲ್ಲಾ ಅಟಲ್ (73;52ಎ) ಮತ್ತು ಅಜ್ಮತ್ವುಲ್ಲಾ ಒಮರ್ಝೈ (53; 21ಎ) ಅವರ ಅರ್ಧಶತಕಗಳ ಬಲದಿಂದ ಅಫ್ಗಾನಿಸ್ತಾನ ತಂಡವು ಮಂಗಳವಾರ ಆರಂಭವಾದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹಾಂಗ್ಕಾಂಗ್ ತಂಡವನ್ನು 94 ರನ್ಗಳಿಂದ ಸುಲಭವಾಗಿ ಮಣಿಸಿ ಶುಭಾರಂಭ ಮಾಡಿತು.ಅಫ್ಗನ್ ತಂಡ ನೀಡಿದ್ದ 189 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಹಾಂಗ್ಕಾಂಗ್ ತಂಡವು
20 ಓವರ್ಗಳಲ್ಲಿ 9 ವಿಕೆಟ್ಗೆ 94 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಬಾಬರ್ ಹಯಾತ್ (39;43ಎ) ಮತ್ತು ನಾಯಕ ಯಾಸಿಮ್ ಮುರ್ತಾಜಾ (16) ಮಾತ್ರ ಎರಡಂಕಿ ರನ್ ಗಳಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದ ಅಫ್ಗನ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಅಜೇಯ ಅರ್ಧಶತಕ ಗಳಿಸಿದ ಅಟಲ್ ಮತ್ತು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಒಮರ್ಝೈ ಅವರ ಬ್ಯಾಟಿಂಗ್ ಬಲದಿಂದ ಅಫ್ಗನ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 188 ರನ್ ಗಳಿಸಿತು. ಅಟಲ್ ಮತ್ತು ಮೊಹಮ್ಮದ್ ನಬಿ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು. ಕೊನೆಯ ಹಂತದ ಓವರ್ಗಳಲ್ಲಿ ಒಮರ್ಝೈ ಅಬ್ಬರಿಸಿದರು. ಅಟಲ್ ಮತ್ತು ಒಮರ್ಝೈ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಸೇರಿಸಿದರು.
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಆಡಲಿದೆ.
ಭಾರತ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅಥವಾ ಜಿತೇಶ್ ಶರ್ಮಾ ಅವರನ್ನು ಕಣಕ್ಕಿಳಿಸುವ ಕುರಿತ ಜಿಜ್ಞಾಸೆ ನಡೆಯುತ್ತಿದೆ. ಟಿ20 ತಂಡಕ್ಕೆ ಮರಳಿರುವ ಶುಭಮನ್ ಗಿಲ್ ಅವರನ್ನು ಆರಂಭಿಕ ಬ್ಯಾಟರ್ ಸ್ಥಾನದಲ್ಲಿ ಕಣಕ್ಕಿಳಿಸುವುದರಿಂದ ಸಂಜುಗೆ ಅವಕಾಶ ಸಿಗುವುದು ಖಚಿತವಿಲ್ಲ. ಅವರು ಬೆಂಚ್ ಕಾಯುವ ಸಾಧ್ಯತೆಯೇ ಹೆಚ್ಚಿದೆ. ಗಿಲ್ ಅವರೊಂದಿಗೆ ಅಭಿಷೇಕ್ ಶರ್ಮಾ ಅವರು ಇನಿಂಗ್ಸ್ ಆರಂಭಿಸಿದರೆ ಮೂರನೇ ಸ್ಥಾನದಲ್ಲಿ ತಿಲಕ್ ವರ್ಮಾ ಅವರ ದಾಖಲೆಗಳು ಅಮೋಘವಾಗಿವೆ. ಐಸಿಸಿ ಟಿ20 ಬ್ಯಾಟರ್ಗಳ ಯಾದಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ತಿಲಕ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ನಾಲ್ಕರಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಆಡುವರು. ಇವರ ನಂತರ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಅವರಿಬ್ಬರೂ ಮಧ್ಯಮವೇಗದ ಬೌಲಿಂಗ್ ಮತ್ತು ಕೊನೆಯ ಹಂತದ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಬಲ್ಲರು.
8ನೇ ಸ್ಥಾನದಲ್ಲಿ ಕೋಚ್ ಗಂಭೀರ್ ಅವರು ಬ್ಯಾಟಿಂಗ್ ಕೌಶಲ ಇರುವವರನ್ನೇ ಕಣಕ್ಕಿಳಿಸುವತ್ತ ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ. ಅದಕ್ಕಾಗಿ ಎಡಗೈ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ಆಡುವುದು ಬಹುತೇಕ ಖಚಿತ.
ಅವರ ನಂತರ ವೇಗಿ ಬೂಮ್ರಾ ಮತ್ತು ಟಿ20 ಮಾದರಿಯಲ್ಲಿ ಯಶಸ್ವಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರಿರುತ್ತಾರೆ.ಇನ್ನೋರ್ವ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್ ಆಡುವ ಅವಕಾಶ ಇದೆ.












