ಪುತ್ತೂರು:ಎಲ್ಲರೂ ಸಮಾನರಾದ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಗುರಿ. ನಮ್ಮ ಸಂವಿಧಾನ ಎಲ್ಲರೂ ಓದಬೇಕು ಮತ್ತು ಎಲ್ಲರಿಗೂ ಅರ್ಥ ಆಗಬೇಕು ಆಗ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸರ್ವ ಸಮಾನವಾದ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ
ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಸಂಭ್ರಮದ ಸಲುವಾಗಿ ಅ.20ರಂದು ಪುತ್ತೂರಿನಲ್ಲಿ ಹಮ್ಮಿಕೊಂಡ ‘ಅಶೋಕ ಜನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರಲ್ಲೂ ಸಮಾನತೆಯ ಭಾವನೆ ಮೂಡಿಸಲು, ಎಳವೆಯಲ್ಲಿಯೇ ಸಂವಿಧಾನದ ಮಹತ್ವ ತಿಳಿಸಲು ಶಾಲಾ ಕಾಲೇಜಿನಲ್ಲಿ ಸಂವಿಧಾನದ ಪಿಠಿಕೆ ಓದಿಸುತ್ತಿದ್ದೇವೆ. ಪ್ರತಿಯೊಬ್ಬರನ್ನು ಪ್ರೀತಿಸುವ ಗೌರವಿಸುವ ಮೂಲಕ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಪರಸ್ಪರ ಸಹಿಷ್ಣುತೆ, ಸಹಬಾಳ್ವೆಯಿಂದ ಸಮಾನರಾಗಿ ಎಲ್ಲರೂ ಬದುಕಿದರೆ ಸಂವಿಧಾನದ ಆಶಯ ಈಡೇರಿದಂತಾಗುತ್ತದೆ ಎಂದು ಅವರು ಹೇಳಿದರು.

ಯಾರೂ ಹಸಿವಿನಿಂದ ಬದುಕಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೇವೆ, ನಮಗೆ ಅನ್ನದ ಮಹತ್ವ ಗೊತ್ತಾಗಬೇಕು ಎಂದು ಅವರು ಹೇಳಿದರು. ಸಮ ಸಮಾಜದ ಕನಸು ಕಂಡಿದ್ದ ಬಸವಣ್ಣನವರು ನಮ್ಮೆಲ್ಲರಿಗೂ 2 ತತ್ವಗಳನ್ನು ಬೋಧಿಸಿದ್ದಾರೆ, ಅದು ಕಾಯಕ ಮತ್ತು ದಾಸೋಹ. ಕಾಯಕ ಮಾಡುವಲ್ಲಿ ಎಲ್ಲರು ಭಾಗವಹಿಸಬೇಕು, ನಾವು ಉತ್ಪಾದನೆ ಮಾಡಬೇಕು ಅದನ್ನು ಎಲ್ಲರಿಗೂ ಹಂಚುವ ಕೆಲಸ ಮಾಡಬೇಕು ಎಂದು ಹೇಳಿದರು.ಪುತ್ತೂರಿನಲ್ಲಿ ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಅನುಷ್ಠಾನ ಆಗಲಿದೆ. ಈ ಬಗ್ಗೆ ಯಾರಿಗೂ ಅಮುಮಾನ ಬೇಡ ನಮ್ಮ ಸರಕಾರ ಏನು ಹೇಳ್ತೇವೊ ಅದು ಮಾಡಿಯೇ ಮಾಡ್ತೇವೆ, ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖಂಡರಾದ ಹರೀಶ್ ಕುಮಾರ್, ರಮಾನಾಥ ರೈ, ಅಭಯಚಂದ್ರ ಜೈನ್, ಪದ್ಮರಾಜ್ ಆರ್ ಪೂಜಾರಿ, ಶಕುಂತಲಾ ಶೆಟ್ಟಿ ಕಾವು ಹೇಮನಾಥ ಶೆಟ್ಟಿ, ಮಮತಾ ಗಟ್ಟಿ, ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಮತ್ತಿತರರು ಉಪಸ್ಥಿತರಿದ್ದರು.












