ನವದೆಹಲಿ: ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭೆಯ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆಯತ್ತ ಸಾಗಿದೆ. ಈಗಾಗಲೇ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿರುವ ಬಿಜೆಪಿ, ಉಳಿದ 50 ಕ್ಷೇತ್ರಗಳ ಪೈಕಿ 34ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ
ಎನ್ಪಿಇಪಿ 6ರಲ್ಲಿ ಹಾಗೂ ಇತರೆ ಪಕ್ಷಗಳು 8 ಕಡೆ ಮುನ್ನಡೆಯಲ್ಲಿವೆ.
ಸಿಕ್ಕಿಂನಲ್ಲಿಯೂ ಸಿಕ್ಕಿಂ ಕ್ರಾಂತಿ ಮೋರ್ಚಾ(ಎಸ್ಕೆಎಂ) ಭಾರಿ ಬಹುಮತ ಸಾಧಿಸುವ ಲಕ್ಷಣಗಳು ಕಂಡುಬಂದಿವೆ. ಇಲ್ಲಿನ 32 ವಿಧಾನಸಭಾ ಸ್ಥಾನಗಳ ಪೈಕಿ 31ರಲ್ಲಿ ಮುನ್ನಡೆ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷ ಎಸ್ಡಿಎಫ್ ಒಂದು ಕಡೆಯಷ್ಟೇ ಮುನ್ನಡೆಯಲ್ಲಿದೆ.
ಸಿಕ್ಕಿಂನ 32 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. 2019ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಹಾಗೂ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.
60 ಕ್ಷೇತ್ರಗಳನ್ನು ಒಳಗೊಂಡಿರುವ ಅರುಣಾಚಲ ಪ್ರದೇಶ ವಿಧಾನಸಭೆಯ 50 ಸ್ಥಾನಗಳಿಗೆ ಮತದಾನ ನಡೆದಿತ್ತು. ಆಡಳಿತಾರೂಢ ಬಿಜೆಪಿಯು 10 ಕ್ಷೇತ್ರಗಳನ್ನು ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ.2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 60 ರಲ್ಲಿ 41 ಸ್ಥಾನಗಳನ್ನು ಜಯಿಸಿತ್ತು. ಜೆಡಿಯು 7, ಎನ್ಪಿಪಿ 5, ಕಾಂಗ್ರೆಸ್ 4 ಮತ್ತು ಪಿಪಿಎ 1 ಸ್ಥಾನ ಗೆದ್ದುಕೊಂಡಿದ್ದರೆ, ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು.
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ ಆರಂಭವಾಗಿದೆ.ಈ ಎರಡೂ ರಾಜ್ಯಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್ 19 ರಂದು ಏಕಕಾಲದಲ್ಲಿ ನಡೆದಿತ್ತು.