ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮೂವರ ನೇಮಕ ಮಾಡಲಾಗಿದೆ. ಸುಳ್ಯ ರಂಗಮಯೂರಿಯ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಮಡಿಕೇರಿ ತಾಲೂಕಿನ ಪಾಲೂರಿನ ಸೂದನ ಎಸ್.ಈರಪ್ಪ ಹಾಗೂ ಮಡಿಕೇರಿ ಮರುಗೋಡಿನ ಸಂದೀಪ್ ಮುತ್ತಪ್ಪ ಪೂಲನಕಂಡ ಹೊಸತಾಗಿ ಆಯ್ಕೆಯಾದ ಸದಸ್ಯರು. ಸುಳ್ಯದ ರಂಗಮಯೂರಿ ಕಲಾ ಶಾಲೆಯ
ನಿರ್ದೇಶಕರಾದ ಲೋಕೇಶ್ ಊರುಬೈಲು ಮೂಲತಃ ಮಡಿಕೇರಿ ತಾಲೂಕು ಚೆಂಬು ಗ್ರಾಮದವರು.ಪ್ರಾಥಮಿಕ ವಿದ್ಯಾಭ್ಯಾಸ ಚೆಂಬು ಸರಕಾರಿ ಶಾಲೆಯಲ್ಲಿ ಹಾಗೂ ಪಿ.ಯು.ಸಿ. ಸಂಪಾಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಡಿಪ್ಲೋಮಾ ಇನ್ ಥಿಯೇಟರ್ ಹಂಪಿಯ ಯುನಿವರ್ಸಿಟಿ ಭಂಡಾರ್ಕಾರ್ ಕಾಲೇಜು ಕುಂದಾಪುರದಲ್ಲಿ ಪೂರೈಸಿರುತ್ತಾರೆ. ಇವರು ರಂಗ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ,ಚಂಪಾ ಶೆಟ್ಟಿ, ಶಶಿಧರ ಅಡಪ, ರಾಜ್.ಬಿ.ಶೆಟ್ಟಿ ಯವರ ಜತೆ ಸಹಾಯಕ ನಿರ್ದೇಶಕರಾಗಿ ಹಾಗೂ ಹರಿಕಥಾ ಎಂಬ ನೆನಪು, ಅಣ್ಣು,ನಿಗೂಢ ಮೌನ, ಏಕಂ ವೆಬ್ ಸಿರೀಸ್ ಗೆ ನಿರ್ದೇಶನ ಮಾಡಿದ್ದಾರೆ. ನಿರೀಕ್ಷೆ , ಸ್ಟೈಲಿಂಗ್ ಲ್ಯಾಂಪ್, ಕಾಡು ಕುಣಿಯಿತು ಚಲನಚಿತ್ರಗಳಿಗೆ ನಿರ್ದೇಶನ ಮಾಡಿದ್ದು, ರಾಜ್ಯ ಮಟ್ಟದ ನಾಟಕ ಸ್ಪರ್ಧೆಗೆ ಆಯ್ಕೆಯಾದ ಅಮರ ಸುಳ್ಯ ಸ್ವಾತಂತ್ರ್ಯ ಮತ್ತು ವಿಶ್ವ ಮಾನವ ನಾಟಕದ ನಿರ್ದೇಶನ ಮಾಡಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿಯಲ್ಲಿ ರೇಡಿಯೋ ಕಥೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಮನೆ ಮಾತಾದವರು. ಅರೆಭಾಷೆಯಲ್ಲಿ ಗುಬ್ಬಿ ಗೂಡೆ, ಕಥಾಸಂಕಲನ, ಹಾರ್ ಕೊರಂಗು ಎಂಬ ಧ್ವನಿ ಸುರುಳಿ ಹೊರತಂದಿರುತ್ತಾರೆ. ಕಾರ್ಣಿಕೆ, ಮಾಯಕ, ಎಮ್ಮ ಮನೆಯಂಗಳದಿ ಎಂಬ ಅರೆಭಾಷೆ ನಾಟಕವನ್ನು ರಚಿಸಿ ನಿರ್ದೇಶನ ಮಾಡಿರುತ್ತಾರೆ.
ಅರೆಭಾಷೆ ಮತ್ತು ಅರೆಭಾಷೇತರ ಕಲಾವಿದರನ್ನು ಗುರುತಿಸಿ ಒಟ್ಟು ಸೇರಿಸಿಕೊಂಡು ವಿಶ್ವ ಅರೆ ಭಾಷೆ ಹಬ್ಬ ಆಟಿ-18 ಎಂಬ ವಿನೂತನ ಅರೆಭಾಷೆ ಹಬ್ಬವನ್ನು ಸುಳ್ಯದಲ್ಲಿ ಸಂಘಟಿಸಿದವರು.
ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಳೆದ 7 ವರುಷಗಳಿಂದ ರಂಗ ಮಯೂರಿ ಕಲಾ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.