ಕೊಲ್ಲಮೊಗ್ರ: ಕೃಷಿ ತೋಟಗಳ ಮಣ್ಣಿನಲ್ಲಿ ಪೋಷಕಾಂಶ ಕಡಿಮೆ ಆಗುತ್ತಿರುವ ಕಾರಣದಿಂದ ಅಡಕೆ ಹಳದಿ ರೋಗ, ಎಲೆ ಚುಕ್ಕಿ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ ಎಂದು ಕಾಸರಗೋಡು ಸಿಪಿಸಿಆರ್ ಐ ನ ಸಸ್ಯ ವಿಜ್ಞಾನಿ ಡಾ. ವಿನಾಯಕ ಹೆಗಡೆ ಹೇಳಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ದ.ಕ.ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ಹರಿಹರ, ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ
ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಡೆದ ಅಡಕೆ ಬೆಳೆಗೆ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದ ಬಗ್ಗೆ ನಡೆದ ವಿಚಾರಗೋಷ್ಟಿಯಲ್ಲಿ ಮಾತನಾಡಿದರು.
ಅಡಕೆ ತೋಟಗಳಿಗೆ ಹಲವು ವರ್ಷಗಳ ಹಿಂದೆಯೇ ಹಳದಿ ರೋಗ, ಎಲೆಚುಕ್ಕಿ ರೋಗಗಳು ಅಂಟಿದೆ. 2016 ರಿಂದ ಬೇಸಿಗೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಕಾರಣದಿಂದ ರೋಗಗಳು ಆರಂಭವಾಗಿದೆ. ಮಣ್ಣಿನಲ್ಲಿ ಆರ್ಗಾನಿಕ್ ಕಡಿಮೆ ಆದಾಗ ಸಮಸ್ಯೆಗಳಾಗುತ್ತದೆ ಎಂದು ಹೇಳಿದರು.
ವಿಟ್ಲ ಸಿಪಿಸಿಆರ್ ಐ ನ ಕೀಟಶಾಸ್ತ್ರದ ವಿಜ್ಞಾನಿ ಡಾ. ಮಧು ಮಾತನಾಡಿ ಕೆಲವು ಜಾತಿಯ ಕೀಟಗಳಿಂದ ತೊಂದರೆ ಆಗುತ್ತಿದೆ. ಇವುಗಳನ್ನು ಕೀಟನಾಶಕಗಳನ್ನು ಬಳಸಿ ನಿಯಂತ್ರಣ ಮಾಡಬೇಕು. ಪೋಷಕಾಂಶಗಳ ಬಳಕೆಯ ಮೂಲಕ ರೋಗ ಮತ್ತು ಕೀಟಗಳ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಜೇನು ಕೃಷಿಕ ವಿವೇಕ್ ಪಡ್ಪು ಮಾತನಾಡಿ ಅಡಕೆಗೆ ರೋಗಗಳ ಮಧ್ಯೆ ಜೇನು ಕೃಷಿಗೆ ಬೇಡಿಗೆ ಬಂದಿದೆ. ಉಪಬೆಳೆಯಾದ ಜೇನುಕೃಷಿ ಆಧುನಿಕ ಕೃಷಿಯಾಗಿ ಮಾರ್ಪಡಾಗಿದೆ. ಕೃಷಿಯಲ್ಲಿ ಸಿಗುವ ಖುಷಿ ಯಾವುದರಲ್ಲಿಯೂ ಇಲ್ಲ. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಿದ್ದರೂ ಜೇನಿನ ಬಳಕೆ ಕಡಿಮೆ ಇದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ತಾಲೂಕು ತೋಟಗಾರಿಕಾ ಇಲಾಖೆಯ ಅರಬಣ್ಣ ಪೂಜೇರಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ
ದಯಾನಂದ ಕಲ್ನಾರ್ ಸ್ವಾಗತಿಸಿ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ವಂದಿಸಿದರು.