*ಡಾ.ಸುಂದರ ಕೇನಾಜೆ.
ಭತ್ತ ಬಿತ್ತುವ ಬತ್ತಿ ಹೋಗುವ ಸಂಗತಿ,ಈ ವಿಷಯ ಇಲ್ಲಿ ಎತ್ತಿಕೊಳ್ಳುವುದಕ್ಕೆ ಕಾರಣವಿದೆ, ಹೆಚ್ಚುಕಡಿಮೆ ಮೂರು ಸಾವಿರ ವರ್ಷಗಳ ಹಿಂದಿನಿಂದ ನಡೆದು ಬಂದ ಕೃಷಿ ಪದ್ಧತಿ, ಜೀವನ ಕ್ರಮ, ಸಂಸ್ಕೃತಿಯೊಂದು ಕಳೆದ ಮೂವತ್ತು ವರ್ಷಗಳಿಂದ ನಿಧಾನಕ್ಕೆ ಕಣ್ಮರೆಯಾಗುತ್ತಿದೆ. ಕರ್ನಾಟಕದಾದ್ಯಂತ ಅದರಲ್ಲೂ ಕರಾವಳಿಯ ತುಂಬೆಲ್ಲ ಹರಡಿಕೊಂಡ ಈ ಜೀವನ ಕ್ರಮ ಇದೀಗ ದೂರವಾಗುತ್ತಿದೆ. ಹೌದು, ನಾವು ಉಣ್ಣುವ ಅನ್ನ, ಅದರ ಮೂಲದ ಅಕ್ಕಿ, ಅದಕ್ಕೂ ಮೂಲವಾಗಿರುವ ಭತ್ತ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಹಾಗೆ ನೋಡಿದರೆ, ಭತ್ತದ ಭಾರತೀಯ
ಚರಿತ್ರೆ ಕೇವಲ ಮೂರು ಸಾವಿರ ವರ್ಷಕ್ಕೇ ಸೀಮಿತವಾದುದಲ್ಲ. ಹಿಮಾಲಯದ ಉತ್ತರ ಮತ್ತು ದಕ್ಷಿಣದ ಇಳಿಜಾರು ಪ್ರದೇಶಗಳಲ್ಲಿ ಹದಿನೈದು ಸಾವಿರ ವರ್ಷಗಳ ಹಿಂದೆಯೇ ಕಾಡು ಸಸ್ಯವಾಗಿ ಭತ್ತ ಬೆಳೆಯಲಾಗುತ್ತಿತ್ತು, ಕ್ರಿ.ಪೂ ಒಂಬತ್ತು ಸಾವಿರ ವರ್ಷಗಳ ಹಿಂದೆ ಹಿಮಾಲಯದ ಇನ್ನೊಂದು ಮಗ್ಗುಲಿನ ಚೀನಾ ಪ್ರಾಂತ್ಯಗಳಲ್ಲಿ ಬೇಟೆಗಾರರು ಮತ್ತು ಆಹಾರ ಸಂಗ್ರಾಹಕರು ಭತ್ತದ ಬೀಜಗಳನ್ನು ಬಿತ್ತನೆಗೆ ಎರಚುತ್ತಿದ್ದರು. ಆದ್ದರಿಂದ ಜಗತ್ತಿನಲ್ಲಿ ಇಂದಿಗೂ ಭತ್ತ ಬೆಳೆಯುವುದರಲ್ಲಿ ಚೀನಾ ಮತ್ತು ಭಾರತಕ್ಕೇ ಮೊದಲೆರಡು ಸ್ಥಾನ.
ಆನಂತರದ ಕಾಲದಲ್ಲಿ ಭಾರತದ ನಾನಾ ಭಾಗಗಳಲ್ಲಿ ಭತ್ತ ಬೆಳೆಯುವ ಪುರಾತನ ಕುರುಹುಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಕರ್ನಾಟಕ ಮತ್ತು ಪಶ್ಚಿಮ ಕರಾವಳಿ ಭಾಗಗಳೂ ಪ್ರಮುಖವಾದುವು. ಇಲ್ಲಿ ಭತ್ತವನ್ನು ಲೋಹಯುಗದಲ್ಲಿ ಅಂದರೆ ಸುಮಾರು ಕ್ರಿ.ಪೂ ಒಂದು ಸಾವಿರ ವರ್ಷಗಳಿಗಿಂತ ಮೊದಲೇ ಬೆಳೆಯುತ್ತಾ ಬರಲಾಗಿದೆ.
ದಕ್ಷಿಣ ಭಾರತದ ಜನರ ಪ್ರಧಾನ ಆಹಾರ ಅಕ್ಕಿ. ಹಾಗಾಗಿ ಇದನ್ನು ಇಲ್ಲಿಯ ಎಲ್ಲಾ ರಾಜ್ಯಗಳ ಭಾಷೆಗಳು(ದ್ರಾವಿಡ ಭಾಷೆಗಳಲ್ಲಿ “ಅರಿಸಿ, ಅರಿ, ಅಕ್ಕಿ ಇತ್ಯಾದಿ) ಹೆಚ್ಚುಕಡಿಮೆ ಸಮಾನ ಧ್ವನಿಮಾಗಳಲ್ಲಿ ಬಳಸುತ್ತಿದೆ. ಅಲ್ಲದೇ ಗ್ರೀಸ್(ಅರುಸ), ಅರಬ್(ಅಲ್ರುಸ್), ಸ್ಪೈನ್(ಅರೋಸ್) ರಾಷ್ಟ್ರ ಭಾಷೆಗಳ ಬಳಕೆಯಲ್ಲೂ ಸಾಮ್ಯತೆಗಳಿವೆ. ಈ ಕಾರಣದಿಂದ ಇದು ಜಗತ್ತಿನ ನಾನಾ ಭಾಗಗಳಿಗೆ ದಕ್ಷಿಣ ಭಾರತದಿಂದಲ್ಲೇ ಹರಡಿರಬೇಕು ಎನ್ನುವ ವಾದವೂ ಇದೆ.
ಬಹಳ ಪ್ರಾಚೀನ ಕಾಲದಿಂದಲೂ ಭಾರತಕ್ಕೆ ಭೇಟಿ ನೀಡುತ್ತಾ ಬಂದ ವಿದೇಶಿ ಪ್ರವಾಸಿಗರಾದ ಹ್ಯೂಯನ್ ತ್ಸಾಂಗ್, ಫಾಹಿಯಾನ್, ಟಾಲಮಿ, ಇಬ್ನ್ ಬಟೂಟ, ಬಾರ್ಬೋಸಾ, ಡೆಲ್ಲಾವೆಲ್ಲಿ, ಹೆಮಿಲ್ಟನ್, ಬುಕನಾನ್ ಇವರೆಲ್ಲ ಇಲ್ಲಿಯ ಜನಜೀವನ ಮತ್ತು ಆರ್ಥಿಕ ಚಟುವಟಿಕೆಯಲ್ಲಿ ಭತ್ತ ಬೇಸಾಯವೇ ಪ್ರಧಾನವೆಂದು ದಾಖಲಿಸಿದ್ದಾರೆ.
ಇಷ್ಟು ದೀರ್ಘ ಇತಿಹಾಸ ಇರುವ ಭತ್ತ(ಅಕ್ಕಿ) ಕೇವಲ ಇಲ್ಲಿಯ ಜನರ ಹಸಿವನ್ನು ಮಾತ್ರ ನಿವಾರಿಸುತ್ತಾ ಬಂದುದ್ದಲ್ಲ. ಅದಕ್ಕಿಂತಲೂ ಮುಖ್ಯವಾಗಿ ತನ್ನದೇ ಆದ ಸಂಸ್ಕೃತಿಯೊಂದನ್ನೂ ಕಟ್ಟಿ ಬೆಳೆಸಿದೆ. ಈ ಸಂಸ್ಕೃತಿ ಕೇವಲ ಕರಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕರ್ನಾಟಕದ ನಾನಾ ಪ್ರದೇಶಗಳಿಗೂ ಹರಡಿಕೊಂಡಿದೆ.ವಾರ್ಷಿಕವಾಗಿ ಒಂದು, ಎರಡು ಅಥವಾ ಮೂರು ಬೆಳೆಗಳಾಗಿ ಬೆಳೆಯಬಲ್ಲ ಭತ್ತದ ಹಿಂದೆ ಅಸಂಖ್ಯಾತ ಜನಪದ ಸಾಹಿತ್ಯ, ನಂಬಿಕೆ, ಆಚರಣೆ, ಕ್ರೀಡೆ, ಭೌತಿಕ ಸಂಸ್ಕೃತಿ, ಕ್ರಿಯಾ ಸ್ವರೂಪಗಳಿವೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಭತ್ತದ ಹಿನ್ನಲೆಯ ಜನಪದ ಹಾಡುಗಳಿವೆ. ಬೆಳೆಯನ್ನು ಬೆಳೆಯುವ ಅಥವಾ ಕೊಯ್ಯುವ ಸಂದರ್ಭದ ಅನೇಕ ಕ್ರಿಯಾಚರಣೆಗಳಿವೆ. ಹಬ್ಬಹರಿದಿನಗಳು, ನಂಬಿಕೆಗಳು ಚಾಲ್ತಿಯಲ್ಲಿದ್ದು ಭತ್ತ ಬೇಸಾಯಕ್ಕೆ ಗೌರವದ ಸ್ಥಾನವನ್ನು ನೀಡಲಾಗಿದೆ. ಬದುಕಿನ ಅನಿವಾರ್ಯದ ಕಾರಣದಿಂದಲೋ ಅಥವಾ ಪ್ರಾಚೀನತೆಯ ಕಾರಣದಿಂದಲೋ ಭತ್ತದ ಕುರಿತು ಬಹಳ ಹಿಂದಿನಿಂದ ಇತ್ತೀಚಿನ ವರೆಗೂ ಜನಪದರಿಗೆ ಆದರಾಭಿಮಾನವಿತ್ತು.
ಸಂಸ್ಕ್ರತಿಯ ಭಾಗವಾಗಿರುವ ಭತ್ತ, ದಕ್ಷಿಣ ಭಾರತದ ಜನರ ಜೀವನಾವೃತದ ಭಾಗವೂ ಹೌದು. ಅಂದರೆ ಜನಪದರ ಹುಟ್ಟು, ಋತುಶಾಂತಿ, ಮದುವೆ, ಸೀಮಂತ, ಮರಣ ಮತ್ತು ಉತ್ತರಕ್ರಿಯೆಯಂತಹಾ ಸಂಸ್ಕಾರಗಳಲ್ಲೂ ಭತ್ತದ ಬಳಕೆಗೆ ಆದ್ಯತೆ ಇದೆ.
ಬಹುತೇಕ ಜನಾಂಗಗಳಲ್ಲಿ ಮಗು ಹುಟ್ಟಿದ ತಕ್ಷಣ ದೃಷ್ಟಿ ಕಳೆಯುವ ಕ್ರಿಯಾಚರಣೆಗೆ ಭತ್ತ ಮತ್ತು ಉಪ್ಪು ಬಳಕೆಯಾಗುತ್ತದೆ. ಇಂದಿಗೂ ಮಗುವಿನ ಮೊದಲ ಪ್ರಾಶನ ಅಕ್ಕಿಯ ಅನ್ನದ್ದೇ ಆಗಿದೆ.
ಮುದುವೆಯಲ್ಲೂ ಅಕ್ಕಿಯ ಪಾತ್ರ ಬಹಳ ಮುಖ್ಯವಾದುದು. ಇದನ್ನು ಅನೇಕ ಜಾನಪದ ವಿದ್ವಾಂಸರು ಮತ್ತು ಜನಾಂಗೀಯ ಅಧ್ಯಯನಕಾರರು ವಿಸ್ತೃತವಾಗಿ ಚರ್ಚಿಸಿದ್ದಾರೆ. ಅಕ್ಕಿಯ ಅಕ್ಷತೆ, ಮಡಿಲಕ್ಕಿ, ಅಕ್ಕಿಯ ನೀರಿನಿಂದ ಕೈತೊಳೆಯುವ, ಅಕ್ಕಿಯ ಮೇಲೆ ನಿಂತು ಧಾರೆ ಎರೆಯುವ, ಮುಡಿಯಕ್ಕಿಯ ತೆರೆ(ವಧು ದಕ್ಷಿಣೆ) ನೀಡುವ ಹೀಗೆ ವಿಭಿನ್ನ ಕ್ರಿಯಾಚರಣೆಗಳು ಅನೇಕ ಜನಾಂಗಗಳಲ್ಲಿವೆ. ಸಾವಿನ ಆಚರಣೆಯಲ್ಲೂ ಅಕ್ಕಿಯ ಬಳಕೆ ಇದೆ. ಬಾಯಿಗೆ ಅಕ್ಕಿ ನೀರನ್ನು ಬಿಡುವ, ತಲೆ ಭಾಗದಲ್ಲಿ ಅಕ್ಕಿ, ಕಾಲಿನ ಭಾಗದಲ್ಲಿ ಉಪ್ಪನ್ನು ಕಟ್ಟುವ, ಚಿತೆಯ ಮೇಲಿಟ್ಟ ಮೃತದೇಹದ ಬಾಯಿಗೆ ಕೊನೆಯ ಬಾರಿ ಅನ್ನದ ಅಗುಳನ್ನು ಹಾಕುವ ಪದ್ದತಿ ಇಂದಿಗೂ ಬಹುತೇಕ ಜನಾಂಗಗಳಲ್ಲಿ ಕಂಡು ಬರುತ್ತದೆ. ಸತ್ತ ವ್ಯಕ್ತಿಯ ಉತ್ತರ ಕ್ರಿಯೆಯಲ್ಲೂ ಅಕ್ಕಿಗೆ ಮಹತ್ವವಿದೆ. ಅದ್ದರಿಂದ ದಕ್ಷಿಣ ಭಾರತದ ಜನರ ಜೀವನಾವೃತದಲ್ಲಿ ಅಕ್ಕಿಗೆ(ಭತ್ತ) ದೊರೆತ ಭಾವನಾತ್ಮಕ ಸ್ಥಾನದಷ್ಟು ನಂತರ ಬಂದ ಯಾವುದೇ ಮುಖ್ಯ ಬೆಳೆಗಳಿಗೂ ಸಿಕ್ಕಿಲ್ಲ.
ಆದರೆ ಇಂದು ಅಕ್ಕಿಯ ಮಹತ್ವ ಕಳೆದು ಹೋಗುತ್ತಿದೆ. ಮೂರು ಸಾವಿರ ವರ್ಷಗಳ ಹಿಂದೆ ಬಂದಿದೆ ಎನ್ನಲಾದ ಅಕ್ಕಿಯ ಚರಿತ್ರೆ ಕಳೆದ ಮೂವತ್ತು ವರ್ಷಗಳಿಂದ ಮಾಸುತ್ತಿದೆ. ಕರಾವಳಿ ಹಾಗೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ವಾಣಿಜ್ಯ ಬೆಳೆಗಳದ್ದೇ ಮೇಲುಗೈ, ನಿವೇಶನಕ್ಕಾಗಿ ಗದ್ದೆಗಳ ಬಳಕೆಯೂ ಹೆಚ್ಚಾಗುತ್ತಿದೆ. ಕರಾವಳಿಯಲ್ಲಿ ಭತ್ತದ ಗದ್ದೆಗಳ ಪ್ರಮಾಣ ತೀರಾ ಕುಸಿದಿದೆ. ಕರ್ನಾಟಕದ ಇತರ ಭಾಗಗಳಲ್ಲಿ ೧೯೯೧ ರ ನಂತರ ಒಣ ಭತ್ತ ಬೆಳೆಯುವ ಪ್ರದೇಶಗಳಲೆಲ್ಲಾ ಮೆಕ್ಕೆಜೋಳ ಮತ್ತು ಇತರ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.
ಅಣೆಕಟ್ಟುಗಳ ಸುತ್ತಮುತ್ತಲಿನ ಪ್ರದೇಶಗಳ ಕಥೆಯೂ ಇದೆ. ಹಾಗಾಗಿ ಒಂದು ಕಾಲದಲ್ಲಿ ತಮ್ಮ ಬದುಕಿನ ನಿರ್ವಹಣೆಗೆ ಬೇಕಾಗುವಷ್ಟು ಅಕ್ಕಿಯ ಉತ್ಪಾದನೆ ತಮ್ಮತಮ್ಮಲೇ ಆಗುತ್ತಿತ್ತು. ಆದರೆ ಇಂದು ಅದಕ್ಕಾಗಿ ಬೇರೆ ರಾಜ್ಯ, ಕೆಲವು ಬಾರಿ ಬೇರೆ ದೇಶವನ್ನೂ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅಕ್ಕಿಗಾಗಿ ಕರ್ನಾಟಕ ಪರದಾಡಿದ ನೆನಪು ಅನೇಕರಿಗಿರಬಹುದು. ಅಕ್ಕಿ ಎಲ್ಲಿಂದಲೂ ಸಿಗಬಹುದು, ಆದರೆ ನಮಗೆ ನಾವೇ ಬೆಳೆದು ಪಡೆಯುವುದರಿಂದ ಸಿಗುವ ಧೈರ್ಯ ಬೇರೊಬ್ಬನಿಂದ ಕೊಳ್ಳುವುದರಿಂದ ಸಿಗಲು ಸಾಧ್ಯವೇ ಎನ್ನುವುದೇ ಪ್ರಶ್ನೆ.
(ಡಾ.ಸುಂದರ ಕೇನಾಜೆ ಶಿಕ್ಷಕರು, ಜಾನಪದ ಸಂಶೋಧಕರು ಹಾಗು ಅಂಕಣಕಾರರು)