*ಗಣೇಶ್ ಮಾವಂಜಿ.
ಅಂದ ಹಾಗೆ ಹೈಸ್ಕೂಲ್ನ ಅಂತಿಮ ಮೆಟ್ಟಿಲಾದ ಹತ್ತನೇ ತರಗತಿಯ ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಕಾಲೇಜು ಮೆಟ್ಟಿಲು ಹತ್ತಿ ಎರಡು ವರ್ಷಗಳ ಬಳಿಕ ಬರುವ ದ್ವಿತೀಯ ಪಿಯುಸಿಯ ಪರೀಕ್ಷೆಗಳು ಕಳೆದು ಒಂದಷ್ಟು ದಿನಗಳು ಸರಿದಿವೆ. ಹಣೆಬರಹ ಏನೆಂದು ಗೊತ್ತಾಗುವ ಫಲಿತಾಂಶದತ್ತ ಮಕ್ಕಳ ಹಾಗೂ ಪೋಷಕರ ದೃಷ್ಟಿ ನೆಟ್ಟಿದೆ.
ಪ್ರತೀ ಬಾರಿ ಫಲಿತಾಂಶ ಪ್ರಕಟಗೊಳ್ಳುವಾಗಲೂ ಕೆಲವೊಂದು
ಅಪಸವ್ಯಗಳು ಎದುರಾಗುವುದು ಸಹಜ. ಹೆಚ್ಚು ಅಂಕ ಪಡೆವ ಮಕ್ಕಳು ಹಾಗೂ ಅವರ ಪೋಷಕರು ಹಿಗ್ಗಿ ಹೀರೇಕಾಯಿಯಂತಾಗುವುದು, ಕಡಿಮೆ ಅಂಕ ಪಡೆದವರ ಮುಖ ಬಾಡಿದ ಬದನೆಕಾಯಿಯಂತಾಗುವುದು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಬುದ್ಧಿವಂತ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾದಾಗ ನಿರೀಕ್ಷಿತ ಅಂಕಗಳು ದೊರೆಯದಿರುವ ಸಾಧ್ಯತೆಯೂ ಇರುತ್ತದೆ. ಅದಕ್ಕಾಗಿಯೇ ಪರೀಕ್ಷಾ ಮಂಡಳಿ ಮರು ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಟ್ಟಿದೆ.
ಆದರೆ ಅಷ್ಟರವರೆಗೆ ಕಾಯುವ ವ್ಯವಧಾನವಿಲ್ಲದವರು ಪಡೆದ ಅಂಕಗಳೇ ಜೀವನ ನಿರ್ವಹಣೆಗೆ ಇರುವ ಏಕೈಕ ಹಾದಿ ಎಂಬಂತೆ ಬದುಕನ್ನು ಕೊನೆಗಾಣಿಸುವವರು ಕೂಡಾ ಇರುತ್ತಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಅವರ ಪೋಷಕರು, ಮಕ್ಕಳು ಪಡೆಯುವ ಅಂಕಗಳತ್ತ ತೀವ್ರ ಕುತೂಹಲಿಗಳಾಗಿರುತ್ತಾರೆ. ತಮ್ಮ ಮಕ್ಕಳು ಕಡಿಮೆ ಅಂಕ ಪಡೆದುಕೊಂಡರೆ ನೆರೆಮನೆಯ ಅಥವಾ ಸಂಬಂಧಿಕರ ಮಕ್ಕಳು ಪಡೆಯುವ ಅಂಕಗಳತ್ತ ಪೋಷಕರ ದೃಷ್ಟಿ ನೆಟ್ಟಿರುತ್ತದೆ. ಒಂದು ವೇಳೆ ಅವರ ಅಂಕಗಳು ತಮ್ಮ ಮಕ್ಕಳು ಪಡೆದ ಅಂಕಗಳಿಗಿಂತ ಹೆಚ್ಚಾಗಿದ್ದರಂತೂ ಮನೆಯಲ್ಲಿ ಮಹಾಯುದ್ಧವೇ ನಡೆದುಬಿಡುತ್ತದೆ.
ಇದೆಲ್ಲವೂ ತಪ್ಪಲ್ಲ. ಮಕ್ಕಳ ಬಗ್ಗೆ ಪೋಷಕರ ನಿರೀಕ್ಷೆ, ಅಂಕ ಕಡಿಮೆಯಾದಾಗ ಮನಸ್ಸಿಗೆ ಬೇಸರವಾಗುವುದು, ಇಟ್ಟ ಭರವಸೆ ಹುಸಿಯಾಯಿತಲ್ಲಾ ಎಂದು ಮನಸ್ಸು ಖೇದಗೊಳ್ಳುವುದು.., ಇವೆಲ್ಲವೂ ಸರ್ವೇಸಾಮಾನ್ಯ. ಆದರೆ ಪರೀಕ್ಷೆಯಲ್ಲಿ ಪಡೆವ ಅಂಕಗಳೇ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ.., ಇಲ್ಲದಿದ್ದರೆ ಜೀವನವೇ ಇಲ್ಲ ಎಂಬ ಮನೋಸ್ಥಿತಿಗೆ ಜಾರಿಕೊಳ್ಳುವುದು ಮಾತ್ರ ತೀವ್ರ ಅಪಾಯಕಾರಿ.
ಪಠ್ಯದಲ್ಲಿ ಕಡಿಮೆ ಅಂಕ ಪಡೆದುಕೊಂಡು ಜೀವನದಲ್ಲಿ ದೊಡ್ಡ ಸಾಧನೆಗೈದವರಲ್ಲಿ ಅಗ್ರಸ್ಥಾನಿಗಳಾದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಆಲ್ಬರ್ಟ್ ಐನ್ಸ್ಟೈನ್, ಶಾರುಖ್ ಖಾನ್, ಥೋಮಸ್ ಎಡಿಸನ್.., ಮುಂತಾದವರ ಹೆಸರನ್ನು ಪಟ್ಟಿ ಮಾಡಬಹುದು.
ಆದರೆ ಎಲ್ಲೋ ಇದ್ದ, ಎಲ್ಲೋ ಇರುವ ಅಂತವರನ್ನು ಬದಿಗಿರಿಸಿ ನಮ್ಮ ಸುತ್ತಮುತ್ತಲಿನ ಜನರ ಬದುಕನ್ನೇ ಉದಾಹರಣೆಯಾಗಿ ಇರಿಸಿಕೊಂಡರೆ ಪರೀಕ್ಷೆಯಲ್ಲಿ ಪಡೆವ ಅಂಕಗಳೇ ನೆಮ್ಮದಿಯ ಬದುಕಿಗಿರುವ ಸೂತ್ರ ಅಲ್ಲ ಎಂಬುದು ಮನವರಿಕೆ ಆಗುತ್ತದೆ.
ಓದಿನಲ್ಲಿ ಚುರುಕಿಲ್ಲದ ಹುಡುಗ ಯಾರಾದರೂ ಎದುರಾದರೆ ಪ್ರೀತಿಯಿಂದ ಅಣ್ಣ, ಅಕ್ಕ, ಅಂಕಲ್, ಆಂಟಿ ಎಂದು ಪ್ರೀತಿಯಿಂದ ಮಾತನಾಡಿಸುತ್ತಾನೆ. ಪಠ್ಯದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಎದುರು ಬೆಂಚಿನ ಹುಡುಗಿಗಿಂತ ಹಿಂದಿನ ಬೆಂಚಿನ ಹುಡುಗಿ ಅಮ್ಮನಿಗೆ ಮನೆಗೆಲಸದಲ್ಲಿ ನೆರವಾಗುತ್ತಾಳೆ. ತನಗಿಂತ ಕೆಳಗಿನ ತರಗತಿಯ ಮಕ್ಕಳನ್ನು ಸ್ವಂತ ತಮ್ಮ, ತಂಗಿಯರೆಂಬಂತೆ ಭಾವಿಸಿ ಅವರ ಅಗತ್ಯಗಳಿಗೆ ನೆರವಾಗುವ ಮಕ್ಕಳು ಕೂಡಾ ಇರುತ್ತಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮಕ್ಕಳಿಗಿಂತ ಈ ರೀತಿ ಕರುಣೆ, ಮಾನವೀಯತೆ ಮೆರೆಯುವ ಮಕ್ಕಳೇ ಎಲ್ಲರಿಗೆ ಹೆಚ್ಚು ಇಷ್ಟವಾಗುತ್ತಾರೆ.
ಅದಕ್ಕಿಂತಲೂ ವಿಸ್ತರಿಸಿ ಹೇಳುವುದಾದರೆ ತಮ್ಮ ಹೆತ್ತವರ ಸಂಕಷ್ಟಗಳತ್ತ ಕಿಂಚಿತ್ತೂ ಯೋಚಿಸದೆ ರಚ್ಚೆ ಹಿಡಿದು ಬೇಕುಬೇಕಾದದ್ದನ್ನು ಪಡೆದುಕೊಳ್ಳುವ ಮಕ್ಕಳಿಗಿಂತ ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು ಅಪ್ಪ, ಅಮ್ಮನ ಕಷ್ಟಗಳಿಗೆ ಮರುಗುವ ಮಕ್ಕಳು ಮುಂದೊಂದು ದಿನ ಚಂದದ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.
ನೆಮ್ಮದಿಯ ಬದುಕಿಗೆ ಇಂಜಿನಿಯರ್, ಡಾಕ್ಟರ್ ಅಥವಾ ಗೂಟದ ಕಾರಿನಲ್ಲಿ ತಿರುಗಾಡುವ ಕೆಲಸವೇ ಆಗಬೇಕೆಂದಿಲ್ಲ. ಬೇಕುಬೇಕಾದದ್ದನ್ನು ಪಡೆದುಕೊಳ್ಳಲು ಜೇಬು ತುಂಬಾ ಹಣ ಇರಬೇಕೆಂಬುದು ಸತ್ಯ. ಆದರೆ ಕೊಳೆಯಿರದ ದಿರಿಸು ಧರಿಸಿದ ಕೆಲವರ ಮನಸ್ಸು ತುಂಬಾ ಕೊಳೆಯಾಗಿರುತ್ತದೆ ಎಂಬುದು ಕೂಡಾ ಅಷ್ಟೇ ಸತ್ಯ. ಅಲ್ಲದೆ ಅಂತವರು ಸದಾ ನೆಮ್ಮದಿಯಾಗಿರುತ್ತಾರೆ ಎಂದು ಕೂಡಾ ಹೇಳುವ ಹಾಗಿಲ್ಲ. ಮೈಮುರಿದು ದುಡಿದು ಬೆವರು ಹರಿಸಿದ ವ್ಯಕ್ತಿ ಸಂಜೆ ಮನೆಗೆ ಹೋದಾಗ ನಗುತ್ತಾ ಬಾಯಾರಿಕೆ ನೀಡಿ ಪ್ರೀತಿಯ ಮಾತುಗಳನ್ನಾಡುವ ಪತ್ನಿ, ಅಪ್ಪನ ತೊಡೆ ಏರಿ ಕಚಗುಳಿ ಇಟ್ಟು ನಕ್ಕುನಗಿಸುವ ಮಕ್ಕಳಿದ್ದರೆ ಅದೇ ಸ್ವರ್ಗ. ಅಂತೆಯೇ ಹಣವನ್ನೇ ಹಾಸಿಗೆಯಾಗಿಸುವಷ್ಟು ಶ್ರೀಮಂತಿಕೆ ಇದ್ದ ಮನೆಯಲ್ಲಿ ನೆಮ್ಮದಿಯನ್ನು ಭೂತಕನ್ನಡಿ ಇರಿಸಿ ಹುಡುಕಿದರೂ ಸಿಗದಷ್ಟು ನೆಮ್ಮದಿಗೆ ಬರ ಆ ಮನೆಯಲ್ಲಿರುತ್ತದೆ. ಹೀಗಿದ್ದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಜೇಬು ತುಂಬಾ ಹಣ ಗಳಿಸುವ ಉದ್ಯೋಗ ದೊರೆತರೇನು ಪ್ರಯೋಜನ?
ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಜೀವನ ನಿರ್ವಹಣೆಗಾಗಿ ಕೈ ತುಂಬಾ ಸಂಬಳ ಪಡೆಯುವ ಎಲ್ಲರ ಮನೆಯಲ್ಲೂ ನೆಮ್ಮದಿಗೆ ಬರಗಾಲ ಇರುತ್ತದೆ ಎಂಬುದು ನನ್ನ ವಾದವಲ್ಲ. ಬದಲಾಗಿ ಕಡಿಮೆ ಅಂಕ ಬಂದವರೂ ದುರಭ್ಯಾಸಗಳಿಗೆ ಅಂಟಿಕೊಳ್ಳದೆ ದೂರ ಉಳಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ ಎಂಬುದಷ್ಟೇ ನನ್ನ ಅಭಿಪ್ರಾಯ.
ಬಾಳಿಗೊಂದು ಗುರಿ ಇರಬೇಕು ನಿಜ. ಆ ಗುರಿಯನ್ನು ಬೆನ್ನಟ್ಟಲು ಅವಿರತ ಶ್ರಮದ ಅವಶ್ಯಕತೆ ಇದೆ ಎನ್ನುವುದು ಕೂಡಾ ಅಷ್ಟೇ ನಿಜ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲೆಂದು ಹಗಲಿರುಳು ಪ್ರಯತ್ನಪಟ್ಟರೂ ಉತ್ತಮ ಅಂಕ ಸಿಕ್ಕಿಲ್ಲ ಎಂದು ಮರುಗಿ ಜೀವಕ್ಕೆ ಅಂತ್ಯ ತಂದುಕೊಂಡ ಅದೆಷ್ಟೋ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ. ಅಥವಾ ಮಕ್ಕಳು ತಮ್ಮ ನಿರೀಕ್ಷೆಗೆ ತಕ್ಕಂತೆ ಅಂಕ ಪಡೆದಿಲ್ಲ ಎನ್ನುವ ಕಾರಣಕ್ಕಾಗಿ ಬೇರೆ ಮಕ್ಕಳೊಂದಿಗೆ ಹೋಲಿಸಿ ಸದಾ ಮೂದಲಿಸಿದರೆ ಖಿನ್ನತೆಗೆ ಒಳಗಾಗುವ ಅಪಾಯವೂ ಇಲ್ಲದಿಲ್ಲ.
ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಏರಲು ದೊರೆಯುವ ಗೇಟ್ ಪಾಸ್ ನಂತೆ ವರ್ತಿಸುತ್ತದೆಯೇ ಹೊರತು ಅಂಕಗಳು ಬದುಕು ಕಟ್ಟಲು ಬೇಕೇ ಬೇಕಾದ ಅನಿವಾರ್ಯತೆಯಲ್ಲ. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯೂ, ಜಸ್ಟ್ ಪಾಸ್ ಆಗಿ ಮುಂದಿನ ಹಂತಕ್ಕೆ ತೇರ್ಗಡೆಗೊಳ್ಳುವ ವಿದ್ಯಾರ್ಥಿಯೂ ಬದುಕಿನಲ್ಲಿ ಯಶಸ್ಸು ಪಡೆದು ಸಂತೃಪ್ತಿ, ನೆಮ್ಮದಿಯ ಜೀವನ ನಡೆಸಬೇಕೆಂದರೆ ಸತ್ಯ, ಪ್ರಾಮಾಣಿಕತೆ, ಪರಿಶ್ರಮದ ಮೊರೆ ಹೋಗಬೇಕಾದುದು ಅತೀ ಅವಶ್ಯಕ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು).










