*ಗಣೇಶ್ ಮಾವಂಜಿ.
“ನೋಡಾ….ಅವಳು ಇವತ್ತು ಕೆಂಪು ಚೂಡಿದಾರ ಹಾಕಿಕೊಂಡು ಬಂದಿದ್ದಾಳೆ. ನಾನು ಹೇಳಿಲ್ವಾ ಅವಳಿಗೆ ಲೌ ಉಂಟುಂತ?”
“ತಮಾಷೆ ಎಂತ ಗೊತ್ತುಂಟಾ? ಅಂವ ಫಸ್ಟ್ ಈಯರ್ ಹುಡುಗಿಯನ್ನು ಲೌ ಮಾಡ್ತಾ ಇದ್ದಾನೆ. ಹಾಗಿದ್ರೂ ಬಿಳಿ ಡ್ರೆಸ್ ಹಾಕಿಕೊಂಡು ಬಂದಿದ್ದಾನೆ. ಬಹುಶಃ ಖಾಲಿ ಇದ್ದಾನೆ ಎನಿಸಿಕೊಳ್ಳಲಿ ಎಂದು ಬೇರೆ ಹಕ್ಕಿಗಳನ್ನು ಬಲೆಗೆ ಬೀಳಿಸಲು ನೋಡ್ತಿದ್ದಾನೋ ಏನೋ?!”
” ಛೇ., ಬೇಸರ ಎಂತ ಗೊತ್ತುಂಟಾ? ಮೊನ್ನೆ ಮೊನ್ನೆಯವರೆಗೆ ಲೌ ಬರ್ಡ್ಸ್ ತರಹ ಇದ್ದ ಆ ಫೈನಲ್ ಈಯರ್ನ ಜೋಡಿ ಈಗ ಬ್ರೇಕ್ ಅಪ್ ಅಂತೆ. ಅವನನ್ನು ಈಗ ನೋಡ್ಲಿಕ್ಕೆ ಆಗುವುದಿಲ್ಲ. ಇವತ್ತು ಬ್ರೇಕ್ ಅಪ್ ಸಿಂಬಲ್
ಗಾಗಿ ಕಪ್ಪು ಡ್ರೆಸ್ ಹಾಕಿಕೊಂಡು ಬಂದಿದ್ದಾನೆ ನೋಡು..!.”
ಪ್ರೇಮಿಗಳ ದಿನದಂದು ಕಾಲೇಜು ಕಾರಿಡಾರಿನಲ್ಲಿ ಕೇಳಿ ಬರುವ ಡಯಲಾಗ್ಗಳಿವು. ಈಗ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿದ್ದರೂ ಸಂಜೆ ಹೊರಗೆ ಹೊರಟಾಗ ಹದಿಹರೆಯದ ಮಕ್ಕಳು, ಯುವಕ, ಯುವತಿಯರು ಬಣ್ಣದ ಬಟ್ಟೆ ಧರಿಸಿ ವೆಲೆಂಟೈನ್ ದಿನಕ್ಕೊಂದು ನೈಜ ಅರ್ಥ ಕಲ್ಪಿಸುತ್ತಾರೆ ನಿಜ.
ಕಾಲೇಜಿನ ಕಾರಿಡಾರಿನಲ್ಲಿ ಪ್ರೇಮಿಗಳ ದಿನಾಚರಣೆ ದಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಧರಿಸುವ ದಿರಿಸಿಗೆ ಬೇರೆಯದೇ ಅರ್ಥ ಕಲ್ಪಿಸಲಾಗುತ್ತದೆ. ಕೆಂಪು ಡ್ರೆಸ್ ಹಾಕಿದರೆ ಅವರಿಗೆ ಈಗಾಗಲೇ ಲೌ ಇದ್ದು ಅವರು ಬೇರೆಯವರ ಸೊತ್ತು ಎಂದರ್ಥ. ಹಾಗಾಗಿ ಅವರ ಹೃದಯದಲ್ಲಿ ಬೇರೆ ಯಾರಿಗೂ ಜಾಗ ಇಲ್ಲ…ಬೇರೆ ಯಾರೂ ಲೌ ಅಪ್ಲಿಕೇಶನ್ ಹಾಕುವ ಹಾಗಿಲ್ಲ ಎಂಬ ಸಂದೇಶ ರವಾನಿಸಿದಂತಾಗುತ್ತದೆ. ಗುಲಾಬಿ (ಪಿಂಕ್) ಬಣ್ಣದ ಡ್ರೆಸ್ ಹಾಕಿದರೆ ಯಾರಲ್ಲೋ ಪ್ರೀತಿ ಶುರುವಾಗಿದ್ದು ಪ್ರಪೋಸ್ ಮಾಡಲು ಮನಸ್ಸಿದೆ ಎಂದರ್ಥ. ಹಳದಿ ದಿರಿಸು ಧರಿಸಿದವರಿದ್ದರೆ ಅಂತವರು ಪ್ರೀತಿಗೆ ಜೈ ಎನ್ನದೆ ಸ್ನೇಹಕ್ಕೆ ಮಾತ್ರ ಸೈ ಎನ್ನುವವರು ಎಂದರ್ಥ. ಬಿಳಿ ಬಟ್ಟೆ ಧರಿಸುವವರು ಲೌನ ಬಲೆಗೆ ಬೀಳದವರಾಗಿದ್ದು ಪ್ರೀತಿಯನ್ನು ಒಪ್ಪಲೂ ಮನಸ್ಸಿಲ್ಲದವರು., ನಿರಾಕರಿಸಲೂ ಸಾಧ್ಯವಾಗದೆ ದ್ವಂದ್ವ ನಿಲುವು ಹೊಂದಿದವರು ಎಂದರ್ಥ.

ನೀಲಿ ಬಣ್ಣದ ಡ್ರೆಸ್ ಧರಿಸಿದರೆ ಅಂತವರು ಏಕಮುಖ ಪ್ರೀತಿ ಹೊಂದಿದವರು ಎಂದರ್ಥ. ಯಾರಲ್ಲೋ ಒಬ್ಬರಲ್ಲಿ ಪ್ರೀತಿ ಮೊಳಕೆಯೊಡೆದಿದೆ., ಆದರೆ ಹೇಳಿಕೊಂಡಿಲ್ಲ ಎಂದರ್ಥ. ಕಣ್ಣಿನಲ್ಲೇ ಮಾತಾಡಿಕೊಂಡವರು ಯಾರಾದರೂ ಇದ್ದರೆ ಆ ದಿನ ಪ್ರೊಪೋಸ್ ಮಾಡಿಬಿಡಲಿ ಎಂಬ ಕಾರಣಕ್ಕಾಗಿ ನೀಲಿ ಬಣ್ಣದ ಡ್ರೆಸ್ ಧರಿಸುತ್ತಾರೆ. ಕಪ್ಪು ಕಲರಿನ ಡ್ರೆಸ್ ಹಾಕಿದರೆ ಅಂತವರು ಸಿಂಗಲ್ ಆಗಿದ್ದು ಅವರಿಗೆ ಪ್ರೀತಿಯಲ್ಲಿ ನಂಬಿಕೆ ಇಲ್ಲವಾಗಿದ್ದು ‘ನನ್ನನ್ನು ಯಾರೂ ಡಿಸ್ಟರ್ಬ್ ಮಾಡಬೇಡಿ ಎಂಬ ಸಂದೇಶ ರವಾನಿಸಿದಂತೆಯೂ ಆಗುತ್ತದೆ. ಅಂತವರು ಯಾರೊಂದಿಗೋ ಒಮ್ಮೆ ಪ್ರೀತಿಯಲ್ಲಿ ಮುಳುಗಿ ಬಳಿಕ ಬ್ರೇಕ್ ಅಪ್ ಆಗಿ ಭಗ್ನಪ್ರೇಮಿಯಾಗಿದ್ದಾರೆ ಎಂಬ ಅರ್ಥವನ್ನೂ ಕೊಡುತ್ತದೆ.
ನೇರಳೆ ಬಣ್ಣದ ಡ್ರೆಸ್ ಧರಿಸಿದರೆ ಪ್ರೀತಿಗಾಗಿ ತಲಾಶೆ ನಡೆಸುತ್ತಿದ್ದಾರೆ ಎಂದರ್ಥ.
ಯಾರಾದರೂ ನನಗೆ ಪ್ರೊಪೋಸ್ ಮಾಡಬಹುದು.., ನಾನು ರೆಡಿ ಎಂಬ ಅರ್ಥವನ್ನು ಕೊಡುತ್ತದೆ. ಹಸಿರು ಬಣ್ಣದ ದಿರಿಸು ಧರಿಸಿದರೆ ಹೊಸ ಲೌಗೆ ಅಥವಾ ಹೊಸ ಸ್ನೇಹಕ್ಕೆ ತಾನು ತೆರೆದುಕೊಳ್ಳಲು ಸಿದ್ಧ ಎಂಬ ಅರ್ಥವನ್ನು ಸೂಚಿಸುತ್ತದೆ. ಹೀಗೆ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದ್ದು ಅರ್ಥ ಗೊತ್ತಿಲ್ಲದೆ ಯಾವುದೋ ಬಣ್ಣದ ಡ್ರೆಸ್ ಹಾಕಿದರೆ ಕಾಲೇಜಿನಲ್ಲಿ ಜೊತೆಗಾರರಿಂದ ಕೀಟಲೆಗೆ ಒಳಗಾಗುವುದು ಮಾತ್ರ ನಿಶ್ಚಿತ.
ನಿಜ ಹೇಳಬೇಕೆಂದರೆ ಹೀಗೊಂದು ದಿನ ಇತ್ತೆಂಬುದು ತೊಂಬತ್ತರ ದಶಕದಲ್ಲಿ ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ. ಆರಂಭದಲ್ಲಿ ಮೆಗಾ ಸಿಟಿಗಳಲ್ಲಿನ ಕಾಲೇಜ್ ಕಾರಿಡಾರಿನಲ್ಲಿ ಮಹತ್ವ ಪಡೆದುಕೊಂಡ ಈ ಪ್ರೇಮಿಗಳ ದಿನ ನಂತರ ಹಳ್ಳಿಯ ಸರಕಾರಿ ಕಾಲೇಜಿನ ವಾಶ್ ರೂಂ ಗೋಡೆಗಳಲ್ಲೂ ಸದ್ದು ಮಾಡತೊಡಗಿತು. ಈಗೀಗ ಅಂದರೆ ಈ ಮೊಬೈಲ್ ಯುಗದಲ್ಲಂತೂ ಈ ಪ್ರೇಮಿಗಳ ದಿನಾಚರಣೆ ಸಕತ್ ಸುದ್ದಿ ಮಾಡುತ್ತಿದೆ.
‘ವೆಲೆಂಟೈನ್ ಡೇ’ ಎಂದು ಕರೆಸಿಕೊಳ್ಳುವ ಈ ಪ್ರೇಮಿಗಳ ದಿನಾಚರಣೆಯನ್ನು ಫೆಬ್ರವರಿ ತಿಂಗಳ 14 ರಂದು ಆಚರಿಸಲಾಗುತ್ತದೆ.

ವೆಲೆಂಟೈನ್ ಎಂಬೊಬ್ಬ ಸಂತ ಪ್ರೀತಿಗೆ ಸಪೋರ್ಟ್ ಮಾಡಿದ ಪರಿಣಾಮ ಆಗಿನ ರಾಜನೊಬ್ಬನಿಂದ ಫೆಬ್ರವರಿ 14 ರಂದು ಮರಣ ದಂಡನೆಗೆ ಗುರಿಯಾಗುತ್ತಾನೆ. ಹಾಗಿದ್ದರೂ ಸಾಯುವ ಕೊನೆಯ ಘಳಿಗೆಯಲ್ಲೂ ಆ ಸಂತ ಪ್ರೀತಿಯನ್ನೇ ಪ್ರತಿಪಾದಿಸಿದ ಕಾರಣ ಆ ದಿನವನ್ನು ವೆಲೆಂಟೈನ್ ಡೇ ಎಂದು ಆಚರಿಸಲಾಯಿತೆಂಬುದು ಪ್ರತೀತಿ.
ಈ ಪ್ರೇಮಿಗಳ ದಿನ ಕೆಲ ವರ್ಷಗಳಿಂದ ಅತೀ ಹೆಚ್ಚು ಮಹತ್ವ ಪಡೆದುಕೊಳ್ಳಲು ಮತ್ತೊಂದು ಕಾರಣವೂ ಇದೆ. ಪಾಶ್ಚಾತ್ಯ ಸಂಸ್ಕೃತಿಯ ಭಾಗ ಎಂಬುದಾಗಿ ಕರೆಸಿಕೊಳ್ಳುವ ಈ ದಿನದಂದು ಕೆಲ ಪ್ರೇಮಿಗಳು ಲಜ್ಜೆಗೆಟ್ಟು ರಸ್ತೆಯಲ್ಲೇ ಸರಸವಾಡುವುದು, ಪಾರ್ಕ್ ನಲ್ಲಿ ಅತಿರೇಕವಾಡುವುದು, ಫೆವಿಕಾಲ್ ನಂತೆ ಅಂಟಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ವಿಹರಿಸುವುದು ಮಾಮೂಲಿ. ಆಧುನಿಕ ಯುಗದಲ್ಲಿ ಇದೆಲ್ಲಾ ಮಾಮೂಲಿ ಎಂದಂದುಕೊಂಡರೂ ಕೆಲ ಸಂಪ್ರದಾಯಸ್ಥ ಮನಗಳು ಇದನ್ನು ಒಪ್ಪುವುದೇ ಇಲ್ಲ. ಇನ್ನು ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಯ ಹೆಸರಿನಲ್ಲಿ ಕೆಲವೊಂದು ಸಂಘಟನೆಗಳು ಇಂತಹ ಪ್ರೇಮಿಗಳನ್ನು ಹಿಡಿದು ತದಕ್ಕಿದ್ದೂ ಇದೆ. ಮತ್ತೂ ಮುಂದುವರಿದು ಹೀಗೆ ಹಿರಿಯರ ಕಣ್ತಪ್ಪಿಸಿ ಪಾರ್ಕ್, ಬೀಚ್, ಸಿನಿಮಾ ಥಿಯೇಟರ್ ಗಳಲ್ಲಿ ಲಜ್ಜೆಗೆಟ್ಟು ವರ್ತಿಸುವ ಪ್ರೇಮಿಗಳು ಕಂಡು ಬಂದರೆ ಅವರಿಗೇ ಅಲ್ಲೇ ಮದುವೆ ಮಾಡಿಸುವ ಬೆದರಿಕೆ ಒಡ್ಡುವ ಹೇಳಿಕೆಗಳೂ ಕೆಲವು ಸಂಘಟನೆಗಳ ಮುಖಂಡರಿಂದ ಬಂದಾಗ ಪೊಲೀಸ್ ಇಲಾಖೆಯೂ ಎಚ್ಚೆತ್ತುಕೊಂಡು ಪ್ರೇಮಿಗಳ ದಿನದಂದು ಪಾರ್ಕ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಬಂದೋಬಸ್ತ್ ಒದಗಿಸಲು ಪ್ರಾರಂಭಿಸಿತು. ಹೀಗೆ ಪ್ರೇಮಿಗಳ ದಿನಕ್ಕೆ ಹೆಚ್ಚಿನ ಮಹತ್ವ ಬರತೊಡಗಿತು.

ವೆಲೆಂಟೈನ್ ಡೇ ಆಚರಿಸುವುದನ್ನು ವಿರೋಧಿಸುವುದಕ್ಕೆ ಇತ್ತೀಚೆಗೆ ಮತ್ತೊಂದು ಕಾರಣವೂ ಸೇರಿಕೊಂಡಿದೆ. ಭಾರತದ ವಿರೋಧಿ ರಾಷ್ಟ್ರ ಪಾಕಿಸ್ತಾನ ಪ್ರೇರಿತ ಜೈಶ್ ಎ ಮೊಹಮ್ಮದ್ ಎಂಬ ಉಗ್ರ ಸಂಘಟನೆಯೊಂದು ಸಿಆರ್ ಪಿಎಫ್ ಯೋಧರಿದ್ದ ಬಸ್ಸನ್ನು ಗುರಿಯಾಗಿಸಿ ಧ್ವಂಸಗೈದಿತು. ಈ ಘಟನೆ ಘಟಿಸಿದ್ದು 2019 ರ ಫೆಬ್ರವರಿ14 ರಂದು. ಈ ಘಟನೆಯ ನಂತರ ಫೆಬ್ರವರಿ 14 ನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುವ ಬದಲಾಗಿ ಆ ದಿನವನ್ನು ಶೋಕದ ದಿನವಾಗಿ ನೋಡಬೇಕು ಎಂಬುದು ಕೆಲವರ ಅಭಿಪ್ರಾಯವಾಯಿತು.
ಮಾಧ್ಯಮಗಳೂ ಕೂಡಾ ಪ್ರೇಮಿಗಳ ದಿನ ಬೇಕೇ ಬೇಡವೇ ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಲೇಖನ, ಚರ್ಚೆಗೆ ವೇದಿಕೆ ಒದಗಿಸುವ ಹಿನ್ನೆಲೆಯಲ್ಲಿ ಸಹಜವಾಗಿ ಈ ದಿನಾಚರಣೆ ವರ್ಷದಿಂದ ವರ್ಷಕ್ಕೆ ಮಹತ್ವ ಪಡೆದುಕೊಳ್ಳುತ್ತಲೇ ಇದೆ. ಹೆಚ್ಚಾಗಿ ಹದಿಹರೆಯದ ಯುವಕ, ಯುವತಿಯರ ಮನದಲ್ಲಿ ಮೊಳಕೆಯೊಡೆಯುವ ಪ್ರೀತಿಯ ಚಿಗುರು ನಂತರದ ದಿನಗಳಲ್ಲಿ ಬಲಿತು ಪ್ರೇಮಿಗಳ ದಿನದಂದು ಅರಳಿ ಹೂವಾಗುತ್ತದೆ.
ಎಲ್ಲದಕ್ಕೂ ಒಂದು ದಿನವಿರುವಂತೆ ಪ್ರೇಮಿಗಳಿಗೂ ಒಂದು ದಿನ ಇರುವುದು ತಪ್ಪಲ್ಲ. ಪ್ರೀತಿಸುವ ಎರಡು ಹೃದಯಗಳಿಗೆ ಎಲ್ಲಾ ದಿನಗಳೂ ಪ್ರೀತಿಯ ದಿನಗಳೇ ಎನ್ನಬಹುದಾದರೂ ಪರಸ್ಪರ ತಮ್ಮನ್ನು ತಾವು ಹೆಚ್ಚು ಅರಿತುಕೊಳ್ಳಲು ಈ ದಿನವನ್ನು ಬಳಸಿಕೊಳ್ಳಬಹುದು.ಆದರೆ ದುರದೃಷ್ಟವಶಾತ್ ಪ್ರೇಮಿಗಳ ದಿನದಂದು ಪ್ರೀತಿಸುವ ಎರಡು ಹೃದಯಗಳು ಮೈಮರೆತು ದಾರಿ ತಪ್ಪುವ ಘಟನೆಗಳೇ ಅಧಿಕ. ಆಚರಣೆಯ ನೆಪದಲ್ಲಿ ಪಬ್ಗೆ ತೆರಳಿ ಮದ್ಯ ಸೇವಿಸುವುದು, ಏಕಾಂತದಲ್ಲಿ ಸೇರಿ ಅನಾಹುತ ತಂದೊಡ್ಡಿಕೊಳ್ಳುವುದು, ಅಪ್ಪ, ಅಮ್ಮನ ದುಡ್ಡಿನಲ್ಲಿ ಕಾಸ್ಟ್ಲಿ ಗಿಫ್ಟ್ ಖರೀದಿಸಿ ಪರಸ್ಪರ ವರ್ಗಾಯಿಸಿಕೊಳ್ಳುವುದು ಇವೆಲ್ಲಾ ಈಗ ಮಾಮೂಲಿ.
ಇದನ್ನೆಲ್ಲಾ ಬಿಟ್ಟು ಪ್ರೇಮಿಗಳ ದಿನದಂದು ಪ್ರೇಮಿಗಳು ಕುಳಿತು ಪರಸ್ಪರರ ಸರಿ, ತಪ್ಪುಗಳನ್ನು ಪಟ್ಟಿ ಮಾಡುವುದು ಉತ್ತಮ. ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡುವ ವಿಚಾರಗಳನ್ನು ಮರೆತುಬಿಡುವುದು ಅತ್ಯುತ್ತಮ. ವೆಲೆಂಟೈನ್ ಡೇಯ ದಿನ ಜೊತೆಯಾಗಿ ಹೆಜ್ಜೆ ಇರಿಸುವ ಒಪ್ಪಂದದೊಂದಿಗೆ ಬದುಕಿನ ಸುಂದರ ಮಹಲು ಕಟ್ಟಲು ಪರಸ್ಪರ ನಂಬಿಕೆಯ ಒಂದೊಂದೇ ಇಟ್ಟಿಗೆಗಳನ್ನು ಪೇರಿಸುವ ಪಣ ತೊಡುವುದು ಅತ್ಯವಶ್ಯಕ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು).







