ಕೊಚ್ಚಿ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದ ಅಪರಾಧಿಗೆ ಕೇರಳದ ವಿಶೇಷ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಬಿಹಾರ ಮೂಲದ ಅಪರಾಧಿ ಅಶ್ಫಾಕ್ ಆಲಂ(28) 5 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದಿದ್ದ. ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ವಿಶೇಷ ಪೋಕ್ಸೊ ನ್ಯಾಯಾಲಯ ಆದೇಶಿಸಿದೆ.ಅಪರಾಧಿಗೆ
ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಅಡಿಯಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ವಿವಿಧ ಅಪರಾಧಗಳಿಗಾಗಿ ಐದು ಜೀವಾವಧಿ ಶಿಕ್ಷೆಯನ್ನೂ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಸಿಎಂ ಪಿಣರಾಯಿ ವಿಜಯನ್, ಮಕ್ಕಳ ದಿನದಂದು ಪ್ರಕರಣದಲ್ಲಿ ನೀಡಿದ ಶಿಕ್ಷೆಯನ್ನು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರಿಗೆ ಬಲವಾದ ಎಚ್ಚರಿಕೆಯಾಗಿದೆ ಎಂದರು. ಈ ಪ್ರಕರಣದಲ್ಲಿ ಒಂದೇ ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲಾಗಿತ್ತು. ಘಟನೆಯ ನಂತರ 3 ತಿಂಗಳಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.
ಜುಲೈ 28 ರಂದು ಆಲುವಾ ಎಂಬಲ್ಲಿ ಮನೆಯಲ್ಲಿದ್ದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಬಳಿಕ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು. ನಂತರ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜವುಗು ಪ್ರದೇಶದಲ್ಲಿ ಬಾಲಕಿಯ ಶವವನ್ನು ಬಣವೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಅಪರಾಧಿಯನ್ನು ಬಂಧಿಸಿದ್ದರು.









