ಸುಳ್ಯ:ಸುಳ್ಯ ಪೈಚಾರ್ನ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಸ್ವಲಾತ್ ವಾರ್ಷಿಕ , ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಯೂತ್ ಸೆಂಟರ್ನ ನೂತನ ಕಛೇರಿ ಉದ್ಘಾಟನೆ ನ.24 ಮತ್ತು 25 ರಂದು ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಅಲ್ ಅಮೀನ್ ಯೂತ್ ಸೆಂಟರ್ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ ಅಮೀನ್ ಯೂತ್ ಸೆಂಟರ್ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಪೈಚಾರ್’ ನ.24ರಂದು ಸಂಜೆ 4.30ಕ್ಕೆ ಮೊಗರ್ಪಣೆ ಮಸೀದಿ ವಠಾರದಿಂದ
ಪೈಚಾರ್ ತನಕ ಆಕರ್ಷಕ ಮೆರವಣಿಗೆ ನಡೆಯಲಿದೆ.ಮೆರವಣಿಗೆಯಲ್ಲಿ ಸ್ಥಳೀಯ 8 ತಂಡಗಳಿಂದ ದಫ್ ಪ್ರದರ್ಶನ ನಡೆಯಲಿದೆ. ಸಂಜೆ 5ಕ್ಕೆ ಅಲ್ ಅಮೀನ್ ಯೂತ್ ಸೆಂಟರ್ನ ನೂತನ ಕಚೇರಿಯ ಉದ್ಘಾಟನೆ ನಡೆಯಲಿದೆ. ಸಂಜೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಮಂಜೇಶ್ವರಂ ಶಾಸಕರಾದ ಎ.ಕೆ.ಎಂ ಅಶ್ರಫ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಸೇರಿದಂತೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ. ರಾತ್ರಿ 9 ರಿಂದ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ರಾಜ್ಯದ ಪ್ರಮುಖ12 ದಫ್ ತಂಡಗಳು ಭಾಗವಹಿಸಲಿದೆ. ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ
ಪ್ರಥಮ ಬಹುಮಾನ 13,000, ದ್ವಿತೀಯ 10,000, ತೃತೀಯ 7,000 ನಗದು ಬಹುಮಾನ ನೀಡಲಾಗುವುದು ಎಂದು ಅವರು ವಿವರಿಸಿದರು.
ನ.25ರಂದು ಸಂಜೆ 7ರಿಂದ ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ಕೋಲಪ್ಪುರಂ ಕೇರಳ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ. ಬಿಜೆಎಂ ಖತೀಬರಾದ ಶಮೀರ್ ಅಹ್ಮದ್ ನಈಮಿ ಮುಖ್ಯ ಪ್ರಭಾಷಣ ಮಾಡುವರು ಎಂದು ಅಬ್ದುಲ್ ಸತ್ತಾರ್ ವಿವರಿಸಿದರು.
ಪೈಚಾರ್ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಆರ್.ಬಿ.ಬಶೀರ್ ಮಾತನಾಡಿ ಅಲ್ ಅಮೀನ್ ಯೂತ್ ಸೆಂಟರ್ ಕಳೆದ 18 ವರ್ಷಗಳಿಂದ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕೋವಿಡ್ ಕಾಲದಲ್ಲಿ ಹಲವು ಸಹಾಯ ಹಸ್ತಗಳನ್ನು ನೀಡಲಾಗಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಸಹಾಯವನ್ನು ವಿತರಿಸಲಾಗಿತ್ತು. ಎರಡು ದಶಕಗಳಿಂದ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನ ಮಾನಸದಲ್ಲಿ ನೆಲೆಯಾಗಿದೆ. ಇದೀಗ ಪ್ರಥಮ ಬಾರಿಗೆ ರಾಜ್ಯಮಟ್ಟದ ದಫ್ ಸ್ಪರ್ಧೆಯನ್ನು ಏರ್ಪಡಿಸಲಾಗುತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಲ್ ಅಮೀನ್ ಯೂತ್ ಸೆಂಟರ್ನ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಸದಸ್ಯರಾದ ಮುಜೀಬ್ ರಹಿಮಾನ್, ಕರೀಂ ಕೆ.ಎಂ.ಉಪಸ್ಥಿತರಿದ್ದರು.