ಕಿಂಗ್ಸ್ಟೌನ್: ವಿಶ್ವಕಪ್ ಟಿ20 ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಅಫ್ಗಾನಿಸ್ತಾನ ಆಘಾತ ನೀಡಿದೆ.ಸೂಪರ್ ಎಂಟರ ಘಟ್ಟದ (ಗುಂಪು 1) ಪಂದ್ಯದಲ್ಲಿ ಭಾನುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ ಆಸ್ಟ್ರೇಲಿಯಾವನ್ನು 21 ರನ್ಗಳಿಂದ ಮಣಿಸಿತು.ಮೊದಲು ಬ್ಯಾಟ್ ಮಾಡಿದ ಅಫ್ಗಾನಿಸ್ತಾನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು
148 ರನ್ ಪೇರಿಸಿತು. ಗುರ್ಬಾಜ್ 60, ಇಬ್ರಾಹಿಂ 51 ರನ್ ಹೊಡೆದು ಗಮನ ಸೆಳೆದರು.ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 19.2 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 127 ರನ್ ಮಾತ್ರ ಗಳಿಸಿತು. ಈ ಮೂಲಕ ಕಾಂಗರೂ ಪಡೆ ಅಫ್ಗಾನಿಸ್ತಾನಕ್ಕೆ ಶರಣಾಯಿತು. ಆಸ್ಟ್ರೇಲಿಯಾ ಪರ ಮ್ಯಾಕ್ಸ್ವೆಲ್ 59 ರನ್ ಹೊಡೆದರು. ಅಫ್ಗಾನಿಸ್ತಾನದ ಬೌಲರ್ ಗಲ್ಬಾದಿನ್ 4 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ನವೀನ್ ವುಲ್ ಹಕ್ ಸಹ 2 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದರು. ಆ ಮೂಲಕ ಅವರು ಚುಟುಕು ಕ್ರಿಕೆಟ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಹಾಗೂ ವಿಶ್ವಕಪ್ನಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ಬೌಲರ್ ಎನಿಸಿಕೊಂಡರು.ಇನಿಂಗ್ಸ್ನ 18ನೇ ಓವರ್ ಬೌಲಿಂಗ್ ಮಾಡಿದ 31 ವರ್ಷದ ವೇಗಿ ಕಮಿನ್ಸ್, ಕೊನೇ ಎಸೆತದಲ್ಲಿ ಅಫ್ಗಾನಿಸ್ತಾನ ನಾಯಕ ರಶೀದ್ ಖಾನ್ ವಿಕೆಟ್ ಪಡೆದರು. ಬಳಿಕ 20ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಕರೀಂ ಜನತ್ ಹಾಗೂ ಗುಲ್ಬದಿನ್ ನೈಬ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಐತಿಹಾಸಿಕ ದಾಖಲೆ ಬರೆದರು.
ಕಮಿನ್ಸ್ ಬಾಂಗ್ಲಾದೇಶ ವಿರುದ್ಧ ನಡೆದ ‘ಸೂಪರ್ 8’ ಹಂತದ ಆ ಪಂದ್ಯದಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.