ಸುಳ್ಯ: ಬೆಳೆಯುತ್ತಿರುವ ಸುಳ್ಯ ನಗರಕ್ಕೆ ಮೂಲ ಸೌಕರ್ಯ ಒದಗಿಸಲು ನಗರ ಪಂಚಾಯತ್ಗೆ ಸ್ಥಳ ಇಲ್ಲ. ಮನೆ ನಿವೇಶನ ನೀಡಲು, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳವಿಲ್ಲ. ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೂ ಸ್ಥಳ ಇಲ್ಲದ ಅವಸ್ಥೆ ಇದೆ. ಆದುದರಿಂದ ಸುಳ್ಯ ನಗರದ ಮೂಲಭೂತ ಸೌಕರ್ಯ ಒದಗಿಸಲು 10-15 ಎಕ್ರೆ ಸ್ಥಳ ಮೀಸಲಿರಿಸಬೇಕು ಎಂದು ನಗರ ಪಂಚಾಯತ್ ಸದಸ್ಯರು ಪುತ್ತೂರು ಸಹಾಯಕ ಕಮೀಷನರ್ ಅವರಲ್ಲಿ ಮನವಿ ಸಲ್ಲಿಸಿದ್ದಾರೆ. ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ
ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಯಿತು. ನ.ಪಂ. ಸದಸ್ಯ ವಿನಯಕುಮಾರ್ ಕಂದಡ್ಕ ವಿಷಯ ಪ್ರಸ್ತಾಪಿಸಿ
ನಗರ ಪಂಚಾಯತ್ ಮೂಲಭೂತ ಅವಶ್ಯಕತೆಗೆ ಭೂಮಿ ಇಲ್ಲದ ಸಮಸ್ಯೆ ಇದೆ. ಮನೆ ನಿವೇಶನ ಒದಗಿಸಲು, ಘನ ತ್ಯಾಜ್ಯ ವಿಲೇವಾರಿಗೆ ನಗರ ಪಂಚಾಯತ್ಗೆ ಜಾಗ ಇಲ್ಲ. ಸುಳ್ಯ ನಗರಕ್ಕೆ 58 ಕೋಟಿ ಮೊತ್ತದ ಕುಡಿಯುವ ನೀರಿನ ಯೀಜನೆ ಮಂಜೂರಾಗಿದೆ. ಆದರೆ ಬೀರಮಂಗಲದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಜಾಗ ಇಲ್ಲ. ಈ ಹಿಂದೆ ನ.ಪಂ.ಗೆ ಜಾಗ ಮಂಜೂರಾಗಿದ್ದರೂ ಅದು ಈಗ ರದ್ದಾಗಿದೆ. ಆದುದರಿಂದ ಟ್ಯಾಂಕ್ ನಿರ್ಮಾಣಕ್ಕೆ ಜಾಗ ಒದಗಿಸಬೇಕು. ನಗರ ಪಂಚಾಯತ್ಗೆ 10 ರಿಂದ 15 ಎಕ್ರೆ ಜಾಗ ಬೇಕು ಮೀಸಲಿರಿಸಬೇಕು ಎಂದರು. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು
ಎಸಿಯವರು ಹೇಳಿದರು. ಬೇರೆ ಕಡೆಯ ಟೌನ್ ಪ್ಲಾನಿಂಗ್ ಇಲ್ಲಿಗೆ ಹೇರುತ್ತಾ ಇದ್ದಾರೆ. ಯೋಜನಾ ಪ್ರಾಧಿಕಾರ ನೀಡಿದ ಟೌನ್ ಪ್ಲಾನಿಂಗ್ ಇಲ್ಲಿ ಅನುಷ್ಠಾನ ಕಷ್ಟ.ಇಲ್ಲಿಗೆ ಸರಳೀಕರಣ ಮಾಡಿ ಅನುಷ್ಠಾನ ಮಾಡಬೇಕು ಎಂದು ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದರೂ ಅನುಷ್ಠಾನ ಆಗಿಲ್ಲ. ಟೌನ್ ಪ್ಲಾನಿಂಗ್ ಸಮರ್ಪಕ ಅನುಷ್ಠಾನ ಆಗದ ಕಾರಣ ಅಕ್ರಮ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಅನಧಿಕೃತ ನಿರ್ಮಾಣ ಹೆಚ್ಚುತ್ತಾ ಇದೆ. ಇದನ್ನು ನಿಯಂತ್ರಣ ಮಾಡಬೇಕು. ಮಿಲಿಟ್ರಿ ಗ್ರೌಂಡ್ನಲ್ಲಿ ಇರುವವರಿಗೆ ಸ್ಥಳ ಮಂಜೂರಾತಿ ಆಗಬೇಕಾಗಿದೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದರು. ಹಂಚಿಕೆ ಮಾಡಿದ ನಿವೇಶನ ಮಾರಾಟ ಆಗುತ್ತಿದೆ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ಜ್ಯೋತಿ ವೃತ್ತ, ಆಲೆಟ್ಟಿ ಕ್ರಾಸ್ನಲ್ಲಿ ಬಿಝಿ ಅವರ್ಸ್ನಲ್ಲಿ ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಬೇಕು ಎಂದು ಹೇಳಿದರು. ಕುಡಿಯುವ ನೀರಿನ ಪೈಪ್ ಅಳವಡಿಸುವಾಗ ಕಾಂಕ್ರೀಟ್, ಡಾಮರು ರಸ್ತೆಯನ್ನು ಕಡಿದು ಸರಿಯಾಗಿ ಮುಚ್ಚಿಲ್ಲ. ಇದರಿಂದ ರಸ್ತೆ ಮಧ್ಯೆ ಹೊಂಡ ಉಂಟಾಗಿ ಸಂಚಾರಕ್ಕೆ ತೊಂದರೆ ಆಗಿದೆ ಎಂದರು. ನಗರ ಪಂಚಾಯತ್ ಸಿಬ್ಬಂದಿಗಳು ಸದಸ್ಯರಿಗೆ ಗೌರವ ಕೊಡುವುದಿಲ್ಲ, ಸಿಬ್ಬಂದಿಗಳ ನಡವಳಿಕೆ ಬದಲಾಗಬೇಕು. ನಗರದಲ್ಲಿ
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಬೀದಿ ದೀಪ ನಿರ್ವಹಣೆಗೆ ವ್ಯಾಪಕ ಪ್ರಚಾರ ಮಾಡಿ ಟೆಂಡರ್ ಮಾಡಬೇಕು ಎಂದರು. ಡ್ಯಾಂನ ಮೇಲೆ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಿದ್ಯುತ್ ಕಂಬ ರಸ್ತೆ ಬದಿ ಅಥವಾ ಚರಂಡಿಯಲ್ಲಿ ಕಂಬ ಹಾಕುವುದು ಅಪಾಯಕಾರಿಯಾಗಿದೆ ಎಂದು ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ ಹೇಳಿದರು.
ಅಪಾಯಕಾರಿ ಕಂಬ, ಮರಗಳು ಇದ್ದರೆ ತೆರವು ಮಾಡಲು ಕ್ರಮ ವಹಿಸಬೇಕು ಎಂದು ಎಸಿಯವರು ಸೂಚಿಸಿದರು. ಸದಸ್ಯರಾದ ಕೆ.ಎಸ್.ಉಮ್ಮರ್ ಮಾತನಾಡಿ ಕಲ್ಚರ್ಪೆ ಮತ್ತೆ ತುಂಬುತ್ತಾ ಇದೆ. ಬರ್ನಿಂಗ್ ಮೆಷಿನ್ ಮೂಲಕ ಆಗುವ ಕಸ ಬರ್ನಿಂಗ್ ಆಗುವುದನ್ನು ಪರಿಶೀಲಿಸಿಬೇಕು. ನಗರ ಪಂಚಾಯತ್ ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳನ್ನು, ಸಿಬ್ಬಂದಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತವರನ್ನು ಬದಲಾವಣೆ ಮಾಡಿ ಎಂದು ಹೇಳಿದರು.
ಎಸಿಯವರು ನೀಡಿದ ಸೂಚನೆ ಏನು.?
ಸದಸ್ಯರು ಸೂಚಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ ಸಹಾಯಕ ಕಮೀಷನರ್ ಕಲ್ಚರ್ಪೆಯ ಘನ ತ್ಯಾಜ್ಯ ಘಟಕ ಸ್ಥಳದ ಜಂಟಿ ಸರ್ವೆ ಮಾಡಲಾಗುವುದು ಎಂದು ಹೇಳಿದರು. ಸುಳ್ಯ ನಗರ ಪಂಚಾಯತ್ ಮತ್ತು ಸುತ್ತಮುತ್ತ ಇರುವ ಸರಕಾರಿ ಜಾಗದ ಕುರಿತು, ಹಾಗೂ ಸರಕಾರಿ ಜಾಗ ಅತಿಕ್ರಮಣಗಳ ಬಗ್ಗೆ ಪಟ್ಟಿ ತಯಾರಿಸುವಂತೆ ಸೂಚಿಸಿದರು. ಎನ್ಎಚ್ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಸೂಚಿಸಿದರು.
ಅಧಿಕಾರಿಗಳು, ಸಿಬ್ಬಂದಿಗಳು ವರ್ತನೆಗಳು ಸರಿಯಾಗಿರಬೇಕು. ಯಾವುದೇ ಸಮಸ್ಯೆ ಬಂದರೂ ಸ್ಪಂದಿಸಬೇಕು. ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು ಎಂದು ಎಸಿಯವರು ಸೂಚನೆ ನೀಡಿದರು. ಟೆಂಡರ್ ಅವಧಿ ಮುಗಿದ ಕೂಡಲೇ ಟೆಂಡರ್ ಮಾಡಬೇಕು. ಪುರಭವನ ಅಭಿವೃದ್ಧಿಗೆ ಇರುವ ಅವಕಾಶದ ಬಗ್ಗೆ ಪರಿಶೀಲನೆ ಮಾಡಿ ಕ್ರಿಯಾ ಯೋಜನೆ ಮಾಡಿ ಪ್ರಸ್ತಾವನೆ ಕಳಿಸಲು ಸೂಚಿಸಿದರು.
ತಹಶೀಲ್ದಾರ್ ಜಿ.ಮಂಜುನಾಥ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಹೆಚ್.ಎಂ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಪಂಚಾಯತ್ನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.