ಹರಾರೆ: ಯಶಸ್ವಿ ಜೈಸ್ವಾಲ್ (93) ಹಾಗೂ ನಾಯಕ ಶುಭಮನ್ ಗಿಲ್ (58) ಬಿರುಸಿನ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ, ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ. ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 3-1ರ ಅಂತರದಲ್ಲಿ
ವಶಪಡಿಸಿಕೊಂಡಿದೆ. 153 ರನ್ಗಳ ಗುರಿ ಬೆನ್ನಟ್ಟಿದ ಭಾರತ 15.2 ಓವರ್ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಬಿರುಸಿನ ಆಟವಾಡಿದ ಜೈಸ್ವಾಲ್ 53 ಎಸೆತಗಳಲ್ಲಿ 93 ರನ್ ಗಳಿಸಿ ಔಟಾಗದೆ ಉಳಿದರು. ಜೈಸ್ವಾಲ್ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ನಾಯಕನ ಆಟವಾಡಿದ ಗಿಲ್ 39 ಎಸೆತಗಳಲ್ಲಿ ಅಜೇಯ 58 ರನ್ (6 ಬೌಂಡರಿ, 2 ಸಿಕ್ಸರ್) ಗಳಿಸಿದರು. ಆ ಮೂಲಕ ಸತತ ಎರಡನೇ ಅರ್ಧಶತಕದ ಸಾಧನೆ ಮಾಡಿದರು.ಜಿಂಬಾಬ್ವೆಯ ಎಲ್ಲ ಬೌಲರ್ಗಳು ದುಬಾರಿಯೆನಿಸಿದರು. ಸರಣಿಯ ಕೊನೆಯ ಪಂದ್ಯ ನಾಳೆ (ಭಾನುವಾರ) ನಡೆಯಲಿದೆ.ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 152 ರನ್ಗಳ ಸಾಧಾರಣ ಮೊತ್ತ ಗಳಿಸಿತು.
ಜಿಂಬಾಬ್ವೆ ಪರ ನಾಯಕ ಸಿಕಂದರ್ ರಝಾ ಗರಿಷ್ಠ 46 ರನ್ ಗಳಿಸಿದರು. ತಡಿವಾನಶೆ ಮರುಮಣಿ 32 ಹಾಗೂ ವೆಸ್ಲಿ ಮಾಧೆವೆರೆ 25 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
ಭಾರತದ ಪರ ಖಲೀಲ್ ಅಹ್ಮದ್ ಎರಡು ವಿಕೆಟ್ ಗಳಿಸಿದರು. ಚೊಚ್ಚಲ ಪಂದ್ಯ ಆಡುತ್ತಿರುವ ತುಷಾರ್ ದೇಶಪಾಂಡೆ ಒಂದು ವಿಕೆಟ್ ಗಳಿಸಿದರು. ಸ್ಪಿನ್ನರ್ ಅಭಿಷೇಕ್ ಶರ್ಮಾ ಕೂಡ ಚೊಚ್ಚಲ ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಸಹ ತಲಾ ಒಂದು ವಿಕೆಟ್ ಗಳಿಸಿದರು.











