ಸೆಂಚುರಿಯನ್: 3ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಅಮೋಘ ಜಯ ಸಾಧಿಸಿತು.ತಿಲಕ್ ವರ್ಮ ಅಜೇಯ ಶತಕ (107; 56ಎಸೆತ) ಮತ್ತು ಅಭಿಷೇಕ್ ಶರ್ಮಾ ಅವರ ಅಬ್ಬರದ ಅರ್ಧಶತಕದ ಬಲದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 219 ರನ್ ಗಳಿಸಿತು. ಇದಕ್ಕುತ್ತರವಾಗಿ ಆತಿಥೇಯ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 208 ರನ್ ಗಳಿಸಿತು. ಕೊನೆಯ ಹಂತದಲ್ಲಿ
ಮಾರ್ಕೊ ಯಾನ್ಸೆನ್ ಅವರು ಸಿಡಿಲಬ್ಬರದ ಅರ್ಧಶತಕ (54; 17ಎ, 4X4, 6X5) ಹೊಡೆದು ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ನಾಟಕೀಯ ತಿರುವು ಕಂಡ ಕೊನೆಯ ಓವರ್ನ ಎರಡನೇ ಎಸೆತದಲ್ಲಿ ಯಾನ್ಸೆನ್ ಒಂದು ಸಿಕ್ಸರ್ ಹೊಡೆದರು. ನಂತರದ ಎಸೆತದಲ್ಲಿ ಅವರನ್ನು ಎಲ್ಬಿ ಬಲೆಗೆ ಕೆಡವಿದ ಅರ್ಷದೀಪ್ ಸಿಂಗ್ ಮಿಂಚಿದರು. ಭಾರತ 11 ರನ್ಗಳಿಂದ ಜಯಿಸಿತು. ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತು. ಇನ್ನೊಂದು ಪಂದ್ಯ ಬಾಕಿ ಇದೆ. ಬೃಹತ್ ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಭಾರತದ ಅರ್ಷದೀಪ್ ಸಿಂಗ್ ಮತ್ತು ಸ್ಪಿನ್ನರ್ ವರುಣ ಚಕ್ರವರ್ತಿ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಅಕ್ಷರ್ ಪಟೇಲ್ ಕೂಡ ಜೊತೆಗೂಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 10 ಓವರ್ಗಳಲ್ಲಿ 84 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಜೊತೆಗೂಡಿದ ಹೆನ್ರಿಚ್ ಕ್ಲಾಸನ್ (41; 22ಎ) ಮತ್ತು ಡೇವಿಡ್ ಮಿಲ್ಲರ್ (18; 18ಎ) ಭಾರತ ತಂಡಕ್ಕೆ ಆತಂಕ ಮೂಡಿಸಿದರು. ಅದರಲ್ಲೂ ಕ್ಲಾಸನ್ ಅವರು ವರುಣ್ ಹಾಕಿದ 14ನೇ ಓವರ್ನಲ್ಲಿ ಸಿಕ್ಸರ್ ಹ್ಯಾಟ್ರಿಕ್ ಸಾಧಿಸಿದರು. ಈ ಓವರ್ನಲ್ಲಿ ಒಟ್ಟು 23 ರನ್ಗಳು ಹರಿದುಬಂದವು. ಇದೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಕ್ಲಾಸನ್ ಕ್ಯಾಚ್ ಕೈಚೆಲ್ಲಿದರು. ಆದರೆ ಇನ್ನೊಂದು ಕಡೆ ಹಾರ್ದಿಕ್ ಮತ್ತು ರವಿ ಬಿಷ್ಣೋಯಿ ಕಡಿವಾಣ ಹಾಕಿದರು. ಇದರಿಂದಾಗಿ ಗೆಲುವಿನ ಅಂತರ ಹೆಚ್ಚಿತು.
ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್ನ ಎರಡನೇ ಎಸೆತದಲ್ಲಿಯೇ ಮಾರ್ಕೊ ಯಾನ್ಸೆನ್ ಅವರು ಸಂಜು ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು. ಇದರಿಂದಾಗಿ ಒತ್ತಡಕ್ಕೊಳಗಾದ ಭಾರತ ತಂಡವನ್ನು ಅಭಿಷೇಕ್ ಮತ್ತು ತಿಲಕ್ ಜೋಡಿಯು ಪಾರು ಮಾಡಿತು. ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಅಭಿಷೇಕ್ ಇಲ್ಲಿ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 3 ಬೌಂಡರಿ ಮತ್ತು 5 ಸಿಕ್ಸರ್ ಎತ್ತಿದರು. ಇಬ್ಬರೂ 2ನೇ ವಿಕೆಟ್ ಜೊತೆಯಾಟದಲ್ಲಿ 107 ರನ್ ಸೇರಿಸಿದರು. 9ನೇ ಓವರ್ನಲ್ಲಿ ಕೇಶವ್ ಮಹಾರಾಜ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಎಡಗೈ ಬ್ಯಾಟರ್ ಅಭಿಷೇಕ್ ಅವರನ್ನು ವಿಕೆಟ್ಕೀಪರ್ ಕ್ಲಾಸೆನ್ ಸ್ಟಂಪಿಂಗ್ ಮಾಡಿದರು.
ಆದರೆ ಇನ್ನೊಂದು ಬದಿಯಲ್ಲಿ ಅಬ್ಬರಿಸುತ್ತಿದ್ದ ತಿಲಕ್ ತಮ್ಮ ಆಟದ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. 32 ಎಸೆತಗಳಲ್ಲಿ 50 ರನ್ ಗಳಿಸಿದರು. ತಾವೆದುರಿಸಿದ 51ನೇ ಎಸೆತದಲ್ಲಿ ಬೌಂಡರಿ ಹೊಡೆಯುವ ಮೂಲಕ ಶತಕದ ಗಡಿ ಮುಟ್ಟಿದರು.