*ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ.
ಬಾಲ್ಯ ಎಂದರೆ ಮಕ್ಕಳು, ಮಕ್ಕಳೆಂದರೆ ಬಾಲ್ಯ.ಬಾಲ್ಯದ ನೆನಪೇ ಸುಂದರ.. ಸುಮಧುರ..ಜವಾಹರಲಾಲ್ ನೆಹರು ಅವರ ಜನ್ಮದಿನದ ನೆನಪನ್ನು ಭಾರತದಾದ್ಯಂತ ಮಕ್ಕಳ ದಿನಾಚರಣೆಯಾಗಿ ಆಚರಿಸಿಕೊಳ್ಳುತ್ತಿರುವ ನಲ್ಮೆಯ ಮಕ್ಕಳಿಗೆಲ್ಲರಿಗೂ ಶುಭಾಶಯಗಳು.ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ಕೂಡ ನಮ್ಮ ಅಂಗೈಯಲ್ಲಿದೆ. ಅದಕ್ಕೆ ಪೂರಕವೆಂಬಂತೆ ನಮ್ಮ ಮಕ್ಕಳನ್ನು ಬೆಳೆಸುತ್ತೇವೆ. ಸ್ಪರ್ಧಾತ್ಮಕ ಬದುಕಿಗೆ ತಕ್ಕಂತೆ ಶಿಕ್ಷಣ,ಉದ್ಯೋಗ, ಸೌಲಭ್ಯ ಕಲ್ಪಿಸಲು ನಾವು ಯಶಸ್ವಿಯಾಗುತ್ತಿದ್ದರೂ.. ಎಲ್ಲೋ ಅವರ ಬಾಲ್ಯದ
ಖುಷಿಯನ್ನೊಳಗೊಂಡ ಮುಗ್ದತೆಯು ಮಕ್ಕಳಿಂದ ದೂರವಾಗುತ್ತಿದೆ ಎಂದೆನಿಸುತ್ತದೆ.
ಹಿಂದೆಲ್ಲಾ ಮನೆ ತುಂಬಾ ಜನ, ಮಕ್ಕಳು.. ಕಷ್ಟದ ದಿನಗಳನ್ನು ಅನುಭವಿಸಿದರೂ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಬಾಲ್ಯದ ಸುಂದರ ಕ್ಷಣಗಳು ಮಾಸದೇ ಇರುತ್ತದೆ. ಹಿಂದಿನ ಮಕ್ಕಳ ಅದೆಷ್ಟೋ ಅವಿಸ್ಮರಣೀಯ ಪ್ರಸಂಗಗಳನ್ನು ಈಗಿನ ಮಕ್ಕಳ ಬಾಲ್ಯಕ್ಕೆ ಹೋಲಿಕೆ ಮಾಡುವುದರ ಹೊರತು ಇನ್ನೇನು ಮಾಡಲು ಸಾಧ್ಯವಿಲ್ಲ. ಕಾರಣ “ಕಾಲ ಬದಲಾಗಿದೆ”ಕಾಲವನ್ನು ಹಿಂದೆ ತಿರುಗಿ ನೋಡಿದರೆ, ಕಾಲು ನಡಿಗೆಯಲ್ಲಿ ಅದೆಷ್ಟು ದೂರ ನಡೆದರೂ ಆಯಾಸವಿರದು, ಸ್ನೇಹಿತರೊಡನೆ ಹೊಳೆ ಕೇರಿ ಬದಿ ಸುತ್ತಿದ್ದಷ್ಟು ಹೆಚ್ಚಾಗುವುದು ಹುಮ್ಮಸ್ಸು. ಹುಣಸೆ ಮರದಡಿಯಲ್ಲಿ
ಸಾಹಸ ಮಾಡಿ ಹಣ್ಣು ಕಿತ್ತು ಜಂಬ ತೋರಿಸುತ್ತಿದ್ದದ್ದು ಸರ್ವೆ ಸಾಮಾನ್ಯ. ಕಾಡು ಗುಡ್ಡವ ಹತ್ತಿ ಕುಂಟಳೆ, ಚೂರಿಕಾಯಿ ಹಣ್ಣಿನ, ನೇರಳೆಯ ಸವಿ ರುಚಿಯ ನೋಡಲೆಂದೇ ಶಾಲೆಯಿಂದ ಭಾರದ ಚೀಲವನ್ನು ಹೊತ್ತು ಓಡುವುದು, ಒಂದೇ ಎರಡೇ ?ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಹೋದರೆ ಪೂರ್ಣವಿರಾಮಕ್ಕೆ ಸಮಯವಿರದು. ದೂರದ ಊರಿನಲ್ಲಿ ದುಡಿಯುತ್ತಿರುವ ಸಂಬಂಧಿ ಅಣ್ಣನೋ, ಚಿಕ್ಕಪ್ಪನೋ ಅಪರೂಪಕ್ಕೆ ಮನೆಗೆ ಬಂದರೆ ಅವರ ಕೈಯಲ್ಲಿ ಇದ್ದ ಮೊಬೈಲ್ ಫೋನನ್ನು ವಿಚಿತ್ರ ಅಥವಾ ವಿಶೇಷ ವಸ್ತುವನ್ನು ನೋಡಿದಂತೆ ಅದನ್ನು ಮುಟ್ಟಿ ನೋಡಲು ಕೂಡ ಭಯ ಪಡುತ್ತಿದ್ದ ಕಾಲ ಅದು. ಮುಟ್ಟಿ ಕೆಟ್ಟು ಹೋದರೆ ಮತ್ತೆ ಕೊಟ್ಟು ಹೋಗುವುದು ಪೆಟ್ಟು; ಎಂಬಂತೆ ಅದರಿಂದ ದೂರದಲ್ಲಿದ್ದೆ ಬೆಳೆದು ಬಂದ ಅಂದಿನ ಕಾಲಕ್ಕೂ ,
ಹಸುಗೂಸು ಅಮ್ಮನ ಇಂಪಾದ ಜೋಗುಳದ ಹಾಡಿನ ಬದಲಿಗೆ ಮೊಬೈಲಿನ ಸಂಗೀತಕ್ಕೆ ಮಾರುಹೋಗಿ ನಿದ್ದೆ ಮಾಡುವುದು, ಅಂದರೆ ಈಗ ಬೆಳೆಯುತ್ತ ಅಲ್ಲ ಬಾಲ್ಯದಲ್ಲೇ ಮೊಬೈಲ್ ಬಗ್ಗೆ ತಿಳಿದುಕೊಂಡಿರುತ್ತಾರೆ. ಆಧುನಿಕ, ಸ್ಪರ್ಧಾತ್ಮಕ ಎಂಬ ಅಂಶ ಈಗಿನ ಮಕ್ಕಳಿಗಿಂತ ಅವರ ಹೆತ್ತವರ ತಲೆಯಲ್ಲಿ ಹೆಚ್ಚು ಹುದುಗಿ ಹೋಗಿದೆ. ಪರೀಕ್ಷೆ ಇದೆ, ಸ್ಪರ್ಧೆ ಇದೆ, ಓದು, ತಯಾರಾಗು, ಅಂಕ ಮಾತ್ರ ಹೆಚ್ಚು ಬರಲೇಬೇಕು ಎಂದು ಹೆತ್ತವರ ತಾಕೀತು. ಸರಿ ತಯಾರಾಗಲು ಮೊಬೈಲು , ಲ್ಯಾಪ್ಟಾಪ್ಗಳು ಜೊತೆಗೇ ಬೇಕಲ್ಲವೇ? ಅರಿವು, ಪಾಠ ಎಲ್ಲಾ ಅಂಗೈಯ್ಯಲ್ಲೆ ಇದೆ.
ಈ ರೀತಿಯಾಗಿ ಮಕ್ಕಳನ್ನು ನಾವು ತಯಾರು ಮಾಡುತ್ತೇವೆ. ಇನ್ನು ಕೆಲವರ ಗೋಳು ಬೇರೆಯೇ ‘ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ, ತಾಳ್ಮೆ ಇಲ್ಲ, ಮಾತೂ ಕೂಡ ಕಠೋರವಾಗಿ ಆಡುತ್ತಾರೆ ಎಂಬ ಬೇರೆ. ಈಗ ಹೆತ್ತವರು ಹೇಳಿದಂತೆ ಮಕ್ಕಳು ಕೇಳುವುದೋ.. ಮಕ್ಕಳ ಅಣತಿಯಂತೆ ಹೆತ್ತವರು ಇರುವುದೋ ಎಂಬ ಸಂಶಯವೂ ಹಲವು ಕಡೆ ಕಂಡು ಬರುತ್ತದೆ. ಅದು ಏನೇ ಇರಲಿ, ಎಷ್ಟೇ ಸ್ಪರ್ಧಾತ್ಮಕ, ಆಧುನಿಕವಾಗಿ ಬೆಳೆಸಿದರೂ ಬದುಕಿನುದ್ದಕ್ಕೂ ನೆನಪಿಡುವ ಆ ಬಾಲ್ಯದ ದಿನಗಳ ಕಾಡು, ಮೇಡು, ಹೊಳೆ, ಮರ, ಮಣ್ಣು, ಕಲ್ಲಿನ ಆಟ, ಕಣ್ಣಾ ಮುಚ್ಚಾಲೆ, ಮರ ಕೋತಿ ಆಟದ ಖುಷಿಯನ್ನು ಈ ಸ್ಪರ್ಧಾತ್ಮಕ ಜಗತ್ತು
ಕಸಿದುಕೊಳ್ಳುತಿದೆಯೇ ಎಂದು ಅನಿಸುತಿದೆ. ಅಂದಿನ ಆ ಬಾಲ್ಯದ ದಿನಗಳು ಎಲ್ಲೋ ಮರೆಯಾಗುತಿದೆ. ಮಕ್ಕಳಿಗೆ ಆ ಬಾಲ್ಯದ ಸೊಬಗನ್ನು ಕೊಡಲು ಹೆತ್ತವರೂ ಹಿಂಜರಿಯುತ್ತಿದ್ದಾರೆ. ಮುದ್ದಿನ ಮಕ್ಕಳು ಮಣ್ಣಿನಲ್ಲಿ ಆಟ ಆಡುವುದು, ಮೈಯೆಲ್ಲಾ ಕೆಸರು, ಧೂಳು ಮೆತ್ತಿದ, ಮರ ಏರುವುದು, ಕಾಡು ಮೇಡು ಸುತ್ತುವುದು ಈಗಿನ ಪೋಷಕರಿಗೆ ಊಹಿಸಲೂ ಸಾಧ್ಯವಿಲ್ಲ. ಪೇಟೆಗೆ ಹೋಗಿ ಸಾಮಾಗ್ರಿಗಳನ್ನು ತರುವುದು, ಅಲ್ಲಲಿ ತಿರುಗಾಡುವುದು, ಸೈಕಲ್ ಸೇರಿ ಊರು ಊರು ಸುತ್ತುವ ಕಾಲವೇ ಕಳೆದು ಹೋದಂತಿದೆ. ಯಾಕೆಂದರೆ ನಮ್ಮದು ವಿಪರೀತ ಕಾಳಜಿ. ಹಾಗಾದರೆ ಹಿಂದಿನ ಕಾಲದಲ್ಲಿ ಕಾಳಜಿ ಆರೈಕೆಗಳು ಇರಲಿಲ್ಲವೇ ? ಎಲ್ಲವೂ ದುಪ್ಪಟ್ಟಾಗಿಯೇ ಇತ್ತು. ಜೊತೆಗೆ ಸುಂದರವಾದ ಬಾಲ್ಯವೂ ಇತ್ತು.
ಆದರೆ ಇಂದು ಅಲ್ಲಲ್ಲಿ ನಡೆಯುವ ಅಪಘಾತ, ಅವಘಡಗಳು, ಆಧುನಿಕ ಜಗತ್ತಿನ ವೇಗಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸುವಾಗ ಮಕ್ಕಳನ್ನು ಸಾಕಷ್ಟು ಜೋಪಾನ ಮಾಡುವುದು ಎಚ್ಚರಿಕೆ ವಹಿಸುವುದು ಕೂಡ ಅನಿವಾರ್ಯವೇ ಆಗಿದೆ. ಆದರೂ ಬಾಲ್ಯದ ಮುಗ್ಧತೆ ಎಂಬುದು ಮನುಷ್ಯ ಆಯುಸ್ಸಿನ ಕೆಲವೇ ವರುಷಗಳು ಮಾತ್ರ ಇರುತ್ತದೆ. ಆದರೆ ಬದುಕಿನುದ್ದಕ್ಕೂ ಸುಂದರ ನೆನಪಾಗಿ ಉಳಿಯುವುದೇ ಆ ಬಾಲ್ಯದ ದಿನಗಳು.. ಆದುದರಿಂದ ಆ ಬಾಲ್ಯದ ದಿನಗಳು ಎಂದೂ ನಷ್ಟವಾಗದಿರಲಿ.. ಆ ಮುಗ್ಧತೆಯ ಸೊಬಗು ಸದಾ ಅರಳುತಿರಲಿ..!
(ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಕವಿಯತ್ರಿ ಹಾಗೂ ಲೇಖಕಿ)