ವಿಶಾಖಪಟ್ಟಣಂ:ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಇಂದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ವಿರಾಟ್ ಶತಕ ದಾಖಲಿಸಿದ್ದಾರೆ. ರೋಹಿತ್ ಕೂಡ ಅಬ್ಬರಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತವನ್ನೂ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಅದರಿಂದಾಗಿ ಸರಣಿಯು
1–1ರ ಸಮಬಲವಾಗಿದೆ. ಅದರಿಂದಾಗಿಯೇ ಕೊನೆಯ ಪಂದ್ಯವು ಕುತೂಹಲದ ಕೇಂದ್ರಬಿಂದುವಾಗಿದೆ. ಟೆಸ್ಟ್ ಸರಣಿಯಲ್ಲಿ 2–0ಯಿಂದ ಜಯಗಳಿಸಿರುವ ತೆಂಬಾ ಬವುಮಾ ಪಡೆಯು ಏಕದಿನ ಮಾದರಿಯಲ್ಲಿಯೂ ಮೇಲುಗೈ ಸಾಧಿಸುವ ಛಲದಲ್ಲಿದೆ. ಆದರೆ ತವರು ನೆಲದಲ್ಲಿಯೇ ಸತತ ಎರಡು ಸರಣಿ ಸೋಲುವುದು ಭಾರತ ತಂಡಕ್ಕೆ ನುಂಗಲಾರದ ತುತ್ತಾಗಬಹುದು. ಆದ್ದರಿಂದ ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಬಳಗವು ಜಯಿಸಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಋತುರಾಜ್ ಗಾಯಕವಾಡ್ ಶತಕ ಬಾರಿಸಿದ್ದರು. ಆದರೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಆದರೆ ಭಾರತ ತಂಡದ ಬೌಲರ್ಗಳು ವೈಫಲ್ಯ ಕಾಣುತ್ತಿದ್ದಾರೆ. ಬೌಲರ್ಗಳು ದುಬಾರಿಯಾದ ಕಾರಣ ಕಳೆದ ಪಂದ್ಯ ಸೋಲನುಭವಿಸಿತು.
ಏಡನ್ ಮರ್ಕರಂ, ಡೆವಾಲ್ಡ್ ಬ್ರೆವಿಸ್ ಹಾಗೂ ನಾಯಕ ತೆಂಬಾ ಅವರು ಉತ್ತಮ ಲಯದಲ್ಲಿರುವುದು ಪ್ರವಾಸಿ ಬಳಗದಲ್ಲಿ ವಿಶ್ವಾಸ ಹೆಚ್ಚಿಸಿದೆ. ಎಡಗೈ ವೇಗಿ ಮಾರ್ಕೊ ಯಾನ್ದೆನ್, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್ ಅವರು ಆತಿಥೇಯ ಬ್ಯಾಟರ್ಗಳಿಗೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ತಂಡಗಳು…
ಭಾರತ: ಕೆ.ಎಲ್. ರಾಹುಲ್ (ನಾಯಕ/ವಿಕೆಟ್ಕೀಪರ್) ರೋಹಿತ್ ಶರ್ಮಾ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ತಿಲಕ್ ವರ್ಮಾ ರಿಷಭ್ ಪಂತ್ (ವಿಕೆಟ್ಕೀಪರ್) ವಾಷಿಂಗ್ಟನ್ ಸುಂದರ್ ರವೀಂದ್ರ ಜಡೇಜ ಕುಲದೀಪ್ ಯಾದವ್ ನಿತೀಶ್ ಕುಮಾರ್ ರೆಡ್ಡಿ ಹರ್ಷಿತ್ ರಾಣಾ ಋತುರಾಜ್ ಗಾಯಕವಾಡ್ ಪ್ರಸಿದ್ಧ ಕೃಷ್ಣ ಅರ್ಷದೀಪ್ ಸಿಂಗ್ ಧ್ರುವ ಜುರೇಲ್.
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ) ಓಟ್ನೀಲ್ ಬಾರ್ತಮನ್ ಕಾರ್ಬಿನ್ ಬಾಷ್ ಮ್ಯಾಥ್ಯೂ ಬ್ರಿಝ್ಕೆ ಡೆವಾಲ್ಡ್ ಬ್ರೆವಿಸ್ ನಾಂದ್ರೆ ಬರ್ಗರ್ ಕ್ವಿಂಟನ್ ಡಿಕಾಕ್ ಟೋನಿ ಡಿ ಝಾರ್ಜಿ ರುಬಿನ್ ಹರ್ಮನ್ ಕೇಶವ್ ಮಹಾರಾಜ ಮಾರ್ಕೊ ಯಾನ್ಸೆನ್ ಏಡನ್ ಮರ್ಕರಂ ಲುಂಗಿ ಎನ್ಗಿಡಿ ರಿಯಾನ್ ರಿಕೆಲ್ಟನ್ ಪ್ರೆನೆಲನ್ ಸುಬ್ರಾಯೆನ್.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಹಾಟ್ಸ್ಟಾರ್












