ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಿಡಿತ ಸಾಧಿಸಿದೆ.ಮೊದಲ ದಿನದಲ್ಲಿ ಅತಿಥೇಯ ಬೌಲರ್ಗಳು ಮೇಲುಗೈ ಸಾಧಿಸಿದರೆ ಎರಡನೇ ದಿನದಾಟದಲ್ಲಿ ಬ್ಯಾಟರ್ಗಳು ಪರಾಕ್ರಮ ಮೆರೆದಿದ್ದಾರೆ.ಇಂಗ್ಲೆಂಡ್ನ 246ಕ್ಕೆ ಉತ್ತರವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 110 ಓವರ್ಗಳಲ್ಲಿ
ಏಳು ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿದೆ. ಮೊದಲ ಇನಿಂಗ್ಸ್ನಲ್ಲಿ 175 ರನ್ಗಳ ಮಹತ್ವದ ಮುನ್ನಡೆ ಗಳಿಸಿದೆ. 80 ರನ್ ಗಳಿಸಿದ ಜೈಸ್ವಾಲ್ ವಿಕೆಟ್ ಇಂದು ಬೇಗನೇ ನಷ್ಟವಾಯಿತು. ಬಳಿಕ ಕ್ರೀಸ್ಗಿಳಿದ ಕೆ.ಎಲ್.ರಾಹುಲ್ 86 ರನ್ಗಳ ಅಮೂಲ್ಯ ಇನಿಂಗ್ಸ್ ಕಟ್ಟಿದರು. ಈ ಮೂಲಕ ಭಾರತ ತಂಡವು ಇನಿಂಗ್ಸ್ ಮುನ್ನಡೆ ಗಳಿಸಲು ನೆರವಾದರು.ಶುಭಮನ್ ಗಿಲ್ (23), ಶ್ರೇಯಸ್ ಅಯ್ಯರ್ (35) ಮತ್ತು ಶ್ರೀಕರ್ ಭರತ್ (41) ಉಪಯುಕ್ತ ಕಾಣಿಕೆ ನೀಡಿದರು.
ಕೆಳ ಕ್ರಮಾಂಕದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ರವೀಂದ್ರ ಜಡೇಜ (81) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ಅಕ್ಷರ್ ಪಟೇಲ್ (35) ಸಾಥ್ ನೀಡುತ್ತಿದ್ದಾರೆ. ಇನ್ನುಳಿದಂತೆ ರವಿಚಂದ್ರನ್ ಅಶ್ವಿನ್ 1 ರನ್ ಗಳಿಸಿ ಔಟ್ ಆದರು.ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ ಹಾಗೂ ಜೋ ರೂಟ್ ತಲಾ ಎರಡು ವಿಕೆಟ್ ಗಳಿಸಿದರು.
ರವಿಚಂದ್ರನ್ ಅಶ್ವಿನ್ (68ಕ್ಕೆ 3), ರವೀಂದ್ರ ಜಡೇಜ (88ಕ್ಕೆ 3) ದಾಳಿಗೆ ಸಿಲುಕಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 246ಕ್ಕೆ ಆಲೌಟ್ ಆಗಿತ್ತು.









