ರಾಯ್ಪುರ:ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೆ 359 ರನ್ಗಳ ಸವಾಲಿನ ಗುರಿ ನೀಡಿದೆ.ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡ, ವಿರಾಟ್ ಕೊಹ್ಲಿ (102), ಋತುರಾಜ್ ಗಾಯಕ್ವಾಡ್ (105) ಭರ್ಜರಿ ಶತಕ ಹಾಗೂ ನಾಯಕ ಕೆ.ಎಲ್.ರಾಹುಲ್ (ಅಜೇಯ 66) ಅವರ ಅರ್ಧಶತಕದ ನೆರವಿನಿಂದ
5 ವಿಕೆಟ್ ನಷ್ಟಕ್ಕೆ 358 ರನ್ ಪೇರಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಕೊಹ್ಲಿ ಅವರು 93 ಎಸೆತಗಳಲ್ಲಿ 102 ರನ್ ಗಳಿಸಿ ಔಟ್ ಆದರು.
ಕಿಂಗ್ ಕೊಹ್ಲಿ ಶತಕದ ಇನಿಂಗ್ಸ್ ಹಲವು ದಾಖಲೆಗಳಿಗೆ ಕಾರಣವಾಗಿದೆ.ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ಬ್ಯಾಟ್ನಿಂದ ಸಿಡಿದ 84ನೇ ಶತಕ ಇದಾಗಿದೆ.ಮೂರನೇ ಕ್ರಮಾಂಕದ ‘ಕಿಂಗ್’ಎಂದೇ ಗುರುತಿಸಿಕೊಂಡಿರುವ ಕೊಹ್ಲಿ ಬ್ಯಾಟ್ನಿಂದ ಆ ಕ್ರಮಾಂಕದಲ್ಲಿ ಇದುವರೆಗೂ 46 ಶತಕ ಸಿಡಿಸಿದ್ದಾರೆ. ಈ ಮೂಲಕ ಒಂದೇ ಕ್ರಮಾಂಕದಲ್ಲಿ
ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಕೊಹ್ಲಿ 135 ರನ್ ಬಾರಿಸಿದ್ದರು. ಯುವ ಬ್ಯಾಟರ್ ಋತುರಾಜ್ ಗಾಯಕವಾಡ್ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಋತುರಾಜ್ 12 ಬೌಂಡರಿ ಹಾಗೂ 2 ಅಮೋಘ ಸಿಕ್ಸರ್ಗಳ ನೆರವಿನಿಂದ ತಮ್ಮ ಚೊಚ್ಚಲ ಶತಕ ದಾಖಲಿಸಿದರು.ಗಾಯಕವಾಡ್ ಅವರು 83 ಎಸೆತಗಳಲ್ಲಿ 105 ರನ್ ಸಿಡಿಸಿ ಮಾರ್ಕೊ ಜಾನ್ಸನ್ ಅವರಿಗೆ ವಿಕೆಟ್ ಒಪ್ಪಿಸಿದರು.ಮತ್ತೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್.ರಾಹುಲ್, ಕೇವಲ 43 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳ ನೆರವಿನಿಂದ ಔಟಾಗದೆ 66 ರನ್ ಗಳಿಸಿದರು. ರವೀಂದ್ರ ಜಡೇಜಾ ಎರಡು ಬೌಂಡರಿಗಳ ನೆರವಿನಿಂದ ಅಜೇಯ 24 ರನ್ ಗಳಿಸಿದರು.





