ಸೆಂಚುರಿಯನ್: ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ ಭಾರತ ಒಡ್ಡಿದ 245 ರನ್ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ, ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದೆ. .ಆ ಮೂಲಕ ಮೊದಲ ಇನಿಂಗ್ಸ್ನಲ್ಲಿ 11 ರನ್ಗಳ ಮುನ್ನಡೆ ಗಳಿಸಿದೆ. ಮಂದ ಬೆಳಕಿನಿಂದಾಗಿ ದಿನದ ಆಟವನ್ನು ಬೇಗನೇ
ಕೊನೆಗೊಳಿಸಲಾಯಿತು. ವೃತ್ತಿ ಜೀವನದ ಕೊನೆಯ ಟೆಸ್ಟ್ ಸರಣಿ ಆಡುತ್ತಿರುವ ಎಡಗೈ ಆರಂಭಿಕ ಬ್ಯಾಟರ್ ಎಲ್ಗರ್, ಆಕರ್ಷಕ ಶತಕ ಗಳಿಸಿ ಸಂಭ್ರಮಿಸಿದರು. 36 ವರ್ಷದ ಎಲ್ಗರ್, ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿದ 14ನೇ ಶತಕ ಇದಾಗಿದೆ.140 ಎಸೆತಗಳಲ್ಲಿ ಎಲ್ಗರ್ ಶತಕ ಪೂರ್ಣಗೊಳಿಸಿದರು. ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಎಲ್ಗರ್, 211 ಎಸೆತಗಳಲ್ಲಿ 23 ಬೌಂಡರಿಗಳ ನೆರವಿನಿಂದ 140 ರನ್ ಗಳಿಸಿದ್ದಾರೆ. ಅತಿಥೇಯರಿಗೆ ಆರಂಭದಲ್ಲೇ ಏಡನ್ ಮಾರ್ಕರಮ್ (5) ವಿಕೆಟ್ ನಷ್ಟವಾಯಿತು. ಈ ವಿಕೆಟ್ ಮೊಹಮ್ಮದ್ ಸಿರಾಜ್ ಗಳಿಸಿದರು. ಬಳಿಕ ಟೋನಿ ಡಿ ಜೋರ್ಝಿ (28) ಜೊತೆಗೂಡಿದ ಎಲ್ಗರ್, ಎರಡನೇ ವಿಕೆಟ್ಗೆ 93 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಜೋರ್ಝಿ ಹಾಗೂ ಕೀಗನ್ ಪೀಟರ್ಸನ್ (2) ವಿಕೆಟ್ಗಳನ್ನು ಕಬಳಿಸಿದ ಜಸ್ಪ್ರೀತ್ ಬೂಮ್ರಾ ಎದುರಾಳಿ ತಂಡಕ್ಕೆ ಆಘಾತ ನೀಡಿದರು.ಬಳಿಕ ಡೇವಿಡ್ ಬೆಡಿಂಗಮ್ (56) ಅವರೊಂದಿಗೂ ಶತಕದ ಜೊತೆಯಾಟ ಕಟ್ಟಿದ ಎಲ್ಗರ್, ಅತಿಥೇಯರಿಗೆ ಇನಿಂಗ್ಸ್ ಮುನ್ನಡೆ ಗಳಿಸಲು ನೆರವಾದರು. 56 ರನ್ ಗಳಿಸಿದ ಬೆಡಿಂಗನ್ ವಿಕೆಟ್ ಅನ್ನು ಸಿರಾಜ್ ಪಡೆದರು.ಕೈಲ್ ವೆರಿಯನ್ (4) ಅವರನ್ನು ಔಟ್ ಮಾಡಿದ ಪ್ರಸಿದ್ಧ ಕೃಷ್ಣ, ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ವಿಕೆಟ್ ಗಳಿಸಿದರು.
ಈ ಮೊದಲು ಕೆ.ಎಲ್. ರಾಹುಲ್ ಗಳಿಸಿದ ಅಮೋಘ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 245 ರನ್ ಕಲೆಹಾಕಲು ಸಾಧ್ಯವಾಯಿತು.14 ಬೌಂಡರಿ, ನಾಲ್ಕು ಸಿಕ್ಸರ್ ನೆರವಿನಿಂದ
ರಾಹುಲ್ 137 ಎಸೆತಗಳಲ್ಲಿ 101 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾದ ಪರ ಕಗಿಸೊ ರಬಾಡ ಐದು ಮತ್ತು ನ್ಯಾಂಡ್ರೆ ಬರ್ಗರ್ ಮೂರು ವಿಕೆಟ್ ಪಡೆದರು.ಮೊದಲ ದಿನದ ಅಂತ್ಯಕ್ಕೆ ಭಾರತ ಎಂಟು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.








