ಹೈದರಾಬಾದ್: ರವೀಂದ್ರ ಜಡೇಜ ಹಾಗೂ ಆರ್. ಅಶ್ವಿನ್ ಸೇರಿದಂತೆ ಭಾರತೀಯ ಬೌಲರ್ಗಳ ಸಾಂಘಿಕ ದಾಳಿಗೆ ನಲುಗಿದ ಇಂಗ್ಲೆಂಡ್, ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 64.3 ಓವರ್ಗಳಲ್ಲಿ 246 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಇದಕ್ಕೆ ಉತ್ತರವಾಗಿ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 23 ಓವರ್ಗಳಲ್ಲಿ ಒಂದು ವಿಕಟ್ ನಷ್ಟಕ್ಕೆ 119 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆಗೆ ಇನ್ನು 127 ರನ್ಗಳ ಅಗತ್ಯವಿದೆ.ಆಕರ್ಷಕ ಅರ್ಧಶತಕ ಗಳಿಸಿರುವ ಯಶಸ್ವಿ ಜೈಸ್ವಾಲ್ (76) ಹಾಗೂ
ಶುಭಮನ್ ಗಿಲ್ (14) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ನಾಯಕ ರೋಹಿತ್ ಶರ್ಮಾ (24) ವಿಕೆಟ್ ನಷ್ಟವಾಗಿದೆ. ಆಗಲೇ ಜೈಸ್ವಾಲ್ ಜತೆ ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ಗೆ ಭಾರತೀಯ ಸ್ಪಿನ್ನರ್ಗಳು ಕಡಿವಾಣ ಹಾಕಿದರು.ಭಾರತದ ಪರ ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಗಳಿಸಿದರು. ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ ಎರಡು ವಿಕೆಟ್ ಗಳಿಸಿದರು.
ಪ್ರವಾಸಿಗರಿಗೆ ಜಾಕ್ ಕ್ರಾಲಿ (20) ಹಾಗೂ ಬೆನ್ ಡಕೆಟ್ (35) ಉತ್ತಮ ಆರಂಭವೊದಗಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಈ ಜೋಡಿ ಮೊದಲ ವಿಕೆಟ್ಗೆ 55 ರನ್ ಪೇರಿಸಿತು.

ಈ ಜೊತೆಯಾಟವನ್ನು ಅಶ್ವಿನ್ ಬೇರ್ಪಡಿಸಿದರು. ಅಲ್ಲಿಂದ ಆಂಗ್ಲರ ಪತನ ಆರಂಭವಾಯಿತು. ಬಳಿಕ ಕ್ರೀಸಿಗಿಳಿದ ಓಲಿ ಪೋಪ್ (1) ಬೇಗನೇ ನಿರ್ಗಮಿಸಿದರು. ಜೋ ರೂಟ್ (29) ಹಾಗೂ ಜಾನಿ ಬೇಸ್ಟೊ (37) ಸ್ವಲ್ಪ ಹೊತ್ತು ಸವಾಲು ಒಡ್ಡಿದರು.
ಬೆನ್ ಫೋಕ್ಸ್ (4), ರೆಹಾನ್ ಅಹ್ಮದ್ (13), ಟಾಮ್ ಹಾರ್ಟ್ಲಿ (23) ರನ್ ಗಳಿಸಿ ಔಟ್ ಆದರು. ಕೊನೆಯ ಹಂತದಲ್ಲಿ ದಿಟ್ಟ ಹೋರಾಟ ನೀಡಿದ ನಾಯಕ ಬೆನ್ ಸ್ಟೋಕ್ಸ್ ಆಕರ್ಷಕ ಅರ್ಧಶತಕ ಗಳಿಸಿದರು.
ಕೊನೆಯವರಾಗಿ ಔಟ್ ಆದ ಸ್ಟೋಕ್ಸ್ 88 ಎಸೆತಗಳಲ್ಲಿ 70 ರನ್ (6 ಬೌಂಡರಿ, 3 ಸಿಕ್ಸರ್) ಗಳಿಸಿದರು. ರೆಹಾನ್ ಅಹ್ಮದ್ 13, ಟಾಮ್ ಹಾರ್ಟ್ಲಿ (23) ಹಾಗೂ ಜಾಕ್ ಲೀಚ್ (11) ಉಪಯುಕ್ತ ಕಾಣಿಕೆ ನೀಡಿದರು.








