ಸುಳ್ಯ: ಸುಳ್ಯಕ್ಕೆ ಮಂಜೂರಾಗಿರುವ 110 ಕೆವಿ ಸಬ್ ಸ್ಟೇಷನ್ನ ಅನುಷ್ಠಾನ ಅನಿವಾರ್ಯ. ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 110 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಆಗಲೇ ಬೇಕು. ಅದಕ್ಕೆ ಸಾರ್ವಜನಿಕರಿಂದ ಉಂಟಾಗಿರುವ ತಡೆ ನಿವಾರಿಸಲು ಎಲ್ಲರೂ ಸಹಕಾರ ನೀಡಬೇಕು, ಎಲ್ಲರೂ ಒಟ್ಟಾಗಿ ಪ್ರಯತ್ನ ನಡೆಸಬೇಕಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯದ 110 ಕೆವಿ ಲೈನ್ನ ಟವರ್ ಹಾಗೂ ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ
ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ವಿಶೇಷ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾ.26ರಂದು ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಎಂ.ಮಂಜುಳ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
110 ಕೆವಿ ಲೈನ್, ಟವರ್ ಹಾಗೂ ಸಬ್ ಸ್ಟೇಷನ್ ಕಾಮಗಾರಿಯ ಕುರಿತು ಹಾಗೂ ಟವರ್, ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ಉಂಟಾಗಿರುವ ವಿರೋಧಗಳ ಬಗ್ಗೆ ಕೆಪಿಟಿಸಿಎಲ್ ಇಂಜಿನಿಯರ್ಗಳು ಮಾಹಿತಿ ನೀಡಿದರು. ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಮಾತನಾಡಿ ಲೈನ್ ಹಾದು ಹೋಗುವ ಮಾರ್ಗದಲ್ಲಿ ಎಷ್ಟು ಮಂದಿಯ ಸ್ಥಳದ ಮೂಲಕ ಹಾದು ಹೋಗುತ್ತದೆ ಎಂಬುದರ ಬಗ್ಗೆ ಪ್ರತಿ ಗ್ರಾಮಗಳ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು. ಬಳಿಕ ಲೈನ್ ಹಾದು ಹೋಗುವಲ್ಲಿ ವಿರೋಧ ವ್ಯಕ್ತವಾಗಿರುವುದನ್ನು ಪರಿಹರಿಸುವ ಪ್ರಯತ್ನ ನಡೆಸುವಂತೆ ಸೂಚಿಸಿದರು.

ಸಮಸ್ಯೆ ಪರಿಹಾರಕ್ಕೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳಬೇಕು. ಮತ್ತು ಕೃಷಿಕರಿಂದ ಉಂಟಾದ ವಿರೋಧದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು. ಲೈನ್ ಹಾದು ಹೋಗುವ ಭಾಗದ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆ ಕುರಿತು ಅವರಿಗೆ ಮನವರಿಕೆ ಮಾಡಬೇಕು ಎಂದು ಸಹಾಯಕ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಕೆಪಿಟಿಸಿಎಲ್, ಮೆಸ್ಕಾಂ, ಅರಣ್ಯ, ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಮಸ್ಯೆ ಪರಿಹಾರಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು, ಅದಕ್ಕೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಎಲ್ಲಾ ರಾಜಕೀಯ ಪಕ್ಷದವರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕೆಪಿಟಿಸಿಎಲ್ ಅಧೀಕಕ್ಷಕ ಇಂಜಿನಿಯರ್ ಜಿ.ಎನ್.ಚೈತನ್ಯ, ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಕೆ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಹಶೀಲ್ದಾರ್ ಎಂ.ಮಂಜುಳಾ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಬೋಧ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ಪ್ರಸಾದ್ ಕಾಟೂರು, ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್,ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ಗಳಾದ ವಿವೇಕಾನಂದ ಶೆಣೈ, ಸಚಿನ್ ಕುಮಾರ್, ವಲಯ ಅರಣ್ಯಾಧಿಕಾರಿ ಕಿರಣ್, 110 ಕೆವಿ ಸಬ್ ಸ್ಟೇಷನ್ ಗುತ್ತಿಗೆದಾರ ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.