ಸುಳ್ಯ:ಸುಳ್ಯಕ್ಕೆ ವಿದ್ಯುತ್ ಸರಬರಾಜು ಮಾಡಲು ನಿರ್ಮಾಣ ಮಾಡಲಾಗುತ್ತಿರುವ 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಸುಳ್ಯ ತಾಲೂಕು ಪಂಚಾಯತ್ನಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಕೆಪಿಟಿಸಿಎಲ್ ಇಂಜಿನಿಯರ್ಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.110 ಕೆವಿ ಲೈನ್ ಎಳೆಯಲು ಒಟ್ಟು
89 ಟವರ್ಗಳು ನಿರ್ಮಾಣ ಆಗಬೇಕಾಗಿದ್ದು 31 ಟವರ್ಗಳ ಫೌಂಡೇಶನ್ ಕಾಮಗಾರಿ ಪೂರ್ತಿಗೊಂಡಿದೆ. ಸಬ್ ಸ್ಟೇಷನ್ ಕಾಮಗಾರಿ ಶೇ.70ರಷ್ಟು ಪೂರ್ತಿಯಾಗಿದೆ. ಸುಳ್ಯ ತಾಲೂಕಿನಲ್ಲಿ 26 ಹಾಗೂ ಪುತ್ತೂರು ತಾಲೂಕಿನಲ್ಲಿ 32 ಟವರ್ಗಳ ನಿರ್ಮಾಣ ಆಗಬೇಕಾಗಿದೆ. ಇದರಲ್ಲಿ ಕೆಲವು ಕಡೆಗಳಲ್ಲಿ ಸಾರ್ವಜನಿಕರ ವಿರೋಧ ಮತ್ತಿತರ ಸಮಸ್ಯೆಗಳು ಇದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ಗಳು ಮಾಹಿತಿ ನೀಡಿದರು.
ಈ ಕುರಿತು ಚರ್ಚೆ ನಡೆದು ಪ್ರತಿ ಟವರ್ ನಿರ್ಮಾಣ ಸ್ಥಳದ ಬಗ್ಗೆ ಹಾಗೂ ಸಮಸ್ಯೆ, ಅಡೆ ತಡೆಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಹಾಗೂ ಸಹಾಯ ಕಮೀಷನರ್ ಪ್ರತಿ ಕಡೆಗಳಲ್ಲಿ ಮತ್ತೊಂದು ಹಂತದಲ್ಲಿ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹರಿಸಲು ಪ್ರಯತ್ನ ನಡೆಸಬೇಕು.ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿ 15 ದಿನದಲ್ಲಿ ವರದಿ ನೀಡುವಂತೆ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಕೆಪಿಟಿಸಿಎಲ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಟವರ್ ಪಾಯಿಂಟ್ಗಳಲ್ಲಿರುವ ಸಮಸ್ಯೆ ಪರಿಹಾರಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು. ಬಳಿಕ ಉಳಿಯುವ

ಟವರ್ ಪಾಯಿಂಟ್ ಸಮಸ್ಯೆಗಳ ಬಗ್ಗೆ ಸಹಾಯಕ ಕಮೀಷನರ್ ನೇತೃತ್ವದಲ್ಲಿ ಸಭೆ ನಡೆಸಿ ಇತ್ಯರ್ಥ ಪಡಿಸಲು ನಿರ್ಧರಿಸಲಾಯಿತು.
ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಹಾಯಕ ಕಮೀಷನರ್ 31 ಟವರ್ ಫೌಂಡೇಶನ್ ಪೂರ್ತಿಯಾಗಿದೆ.14 ಟವರ್ ನಿರ್ಮಾಣಕ್ಕೆ ಸಮಸ್ಯೆ ಇಲ್ಲ, ಮುಂದಿನ 15 -20 ದಿನಗಳಲ್ಲಿ ಸುಮಾರು 25 ಟವರ್ ನಿರ್ಮಾಣಕ್ಕೆ ಇರುವ ಅಡೆ ತಡೆ ನಿವಾರಣೆ ಆಗಲಿದೆ. ಉಳಿದ 18-19 ಟವರ್ಗಳ ನಿರ್ಮಾಣ ಸಂಬಂಧಪಟ್ಟು ಇರುವ ಸಮಸ್ಯೆಗಳನ್ನು ಮುಂದಿನ ಹಂತದಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮುಂದಿನ 3 ತಿಂಗಳಲ್ಲಿ ಟವರ್ ಸ್ಥಳದ ಸಮಸ್ಯೆ ಪರಿಹರಿಸಿ ಕಾಮಗಾರಿ ಪೂರ್ತಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಚೈತನ್ಯ, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಾಥ್ ಆಚಾರ್ಯ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಚಿನ್ ಕುಮಾರ್, ಸಹಾಯಕ ಇಂಜಿನಿಯರ್ ವಿವೇಕಾನಂದ ಶೆಣೈ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಸುಳ್ಯ ಎಸ್ಐ ಸಂತೋಷ್ ಬಿ.ಪಿ, ಭೂದಾಖಲೆಗಳ ಸಹಾಯಕ ನಿರ್ದೇಶಕ ಜನೀಶ್ ಕುಮಾರ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್,ಉಪ ತಹಶೀಲ್ದಾರ್ಗಳಾದ ಚಂದ್ರಶೇಖರ, ರವಿಕುಮಾರ್ ಪ್ರಮುಖರಾದ ಸುಬೋಧ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಹರೀಶ್, ಪ್ರಸಾದ್ ಕಾಟೂರ್ ಮತ್ತಿತರರು ಉಪಸ್ಥಿತರಿದ್ದರು.










