ಮಂಗಳೂರು: ಘನತ್ಯಾಜ್ಯ ಘಟಕ ಚಾಲಕರು ಹಾಗೂ ಸಿಬ್ಬಂದಿಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆ ಸಂಜೀವಿನಿಯಡಿಯಲ್ಲಿ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ದಿಶೆಯಲ್ಲಿ ಆರಂಭಗೊಂಡ ಘನತ್ಯಾಜ್ಯ ಘಟಕದ ಮಹಿಳಾ ಚಾಲಕರು ಹಾಗೂ ನಿರ್ವಾಹಕರಾಗಿ ದುಡಿಯುತ್ತಿರುವ, ದಿನಕೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಸದ್ರಿ ಘಟಕವು
ಗ್ರಾಮ ಪಂಚಾಯತ್ ಅಡಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು, ತದನಂತರ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಗುತ್ತಿಗೆ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕೆಲಸದ ಮೇಲುಸ್ತುವಾರಿಯನ್ನು ಪಂಚಾಯತ್ ಮಟ್ಟದ ಒಕ್ಕೂಟಗಳು ನಿರ್ವಹಿಸುತ್ತಲಿವೆ. ಗ್ರಾಮ ಪಂಚಾಯಿತ್ ನಿಂದ ನೀಡುವ ಅಂತರ್ನಿಧಿ ಹಾಗೂ ಒಣಕಸ ಸಂಗ್ರಹಕ್ಕೆ ನಿಗದಿಪಡಿಸಿರುವ ಸ್ವಚ್ಛತಾ ಸೇವಾ ಶುಲ್ಕದಿಂದ ಗೌರವಧನವನ್ನು ನೀಡಲಾಗುತ್ತಿದೆ. ಆದರೆ ಗ್ರಾಮ ಪಂಚಾಯಿತ್ ಹಣಕಾಸು ಯೋಜನೆಯಡಿ ನೆರವು ಬಾರದೆ ಇದ್ದಲ್ಲಿ ಅಂತರ್ನಿಧಿ ಕೊಡಮಾಡಲು ಆಗುವುದಿಲ್ಲ. ಅದಲ್ಲದೆ ಗ್ರಾಮದ ಹಲವು ಮನೆಗಳಲ್ಲಿ ಒಣಕಸ ನೀಡಲು ಹಾಗೂ ಸೇವಾ ಶುಲ್ಕ ನೀಡಲು
ಹಿಂಜರಿಯುತ್ತಿದ್ದಾರೆ. ವಾರಕ್ಕೆ ಕೇವಲ 1-3 ದಿನ ಕಲಸ ನಿರ್ವಹಿಸಿ ಉಳಿದ ದಿನ ಕೆಲಸವಿಲ್ಲದೆ ದೈನಂದಿನ ಅವರ ಜೀವನ ನಡೆಸಲು ಅಸಾಧ್ಯವಾಗಿದೆ. ಇದರಿಂದ ಇವರ ಆರ್ಥಿಕ ಬಲವರ್ದನೆ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕನಸನ್ನು ನನಸಾಗಿಸಲು ವಿಫಲವಾಗಿದೆ. ಆದುದರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪುತ್ತೂರು, ಬಂಟ್ವಾಳ, ಕಡಬ, ಬೆಳ್ತಂಗಡಿ, ಸುಳ್ಯ ಮುಲ್ಕಿ, ಮೂಡಬಿದಿರೆ. ಉಳ್ಳಾಲ ಮಂಗಳೂರು ತಾಲೂಕಿನ ಕರ್ನಾಟಕ ರಾಜ್ಯ ಪಂಚಾಯತ್ ಘನ ತ್ಯಾಜ್ಯ ಘಟಕ ಚಾಲಕರು ಹಾಗೂ ನಿರ್ವಾಹಕರ ಮಹಾ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು.
ದ. ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಮನವಿ ನೀಡಲಾಯಿತು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಯುವ ಕಾಂಗ್ರೆಸ್ ಮುಖಂಡ ಚೇತನ್ ಕಜೆಗದ್ದೆ, ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 200 ಸಿಬ್ಬಂದಿಗಳು ಉಪಸ್ಥಿತರಿದ್ದರು.