ಪಂಜ:ಪಂಜದಲ್ಲಿ ನಡೆಯುತ್ತಿರುವ ರಾಜ್ಯ ಯುವ ಸಂಭ್ರಮದಲ್ಲಿ ಜ.18ರಂದು ಬೆಳಗ್ಗೆ ಪಂಜ ಸಿ.ಎ. ಬ್ಯಾಂಕ್ ಬಳಿಯಿಂದ ಅದ್ದೂರಿ ಮೆರವಣಿಗೆ ನಡೆಯಿತು.ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್ ಸದ್ದಿನೊಂದಿಗೆ ಸುಗ್ಗಿ ನೃತ್ಯ, ಕರಗ, ಸಿದ್ಧವೇಶ, ಯಕ್ಷಗಾನ ನೃತ್ಯ, ಕಲ್ಲಡ್ಕ ಗೊಂಬೆ, ಕಂಬಳದ ಮೆರುಗು, ಜನಪದ ಸೊಬಗು, ನವಿಲು ನೃತ್ಯ, ಕೋಳಿ ಕಟ್ಟದ ದೃಶ್ಯ, ಹುಲಿ ವೇಷಗಳೊಂದಿಗೆ
ಮಹಿಳೆಯರ ಪೂರ್ಣ ಕುಂಭ ಸ್ವಾಗತ ಮೆರವಣಿಗೆಗೆ ಮೆರುಗು ನೀಡಿತು. ತಾಲೂಕಿನ ಯುವಕ ಯುವತಿ ಮಂಡಲದವರು ಮೆರವಣಿಗೆಯಲ್ಲಿ ತಮ್ಮ ತಂಡಗಳೊಂದಿಗೆ ಭಾಗವಹಿಸಿದ್ದರು. ಯುವಕ -ಯುವತಿ ಮಂಡಲಗಳಿಗೆ ಮೆರವಣಿಗೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಯುವಕ ಮಂಡಲಗಳು ಟ್ಯಾಬ್ಲೋಗಳೊಂದಿಗೆ ಭಾಗವಹಿಸಿದ್ದರು. ಇದು

ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು.
ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಚೆಂಡೆ ಬಾರಿಸಿ, ಯುವ ಸಂಭ್ರಮದ ಬಾವುಟ ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರನ್ನು ತೆರೆದ ವಾಹನದಲ್ಲಿ ಕರೆತರಲಾಯಿತು.












