ಸುಳ್ಯ:ಸುಳ್ಯ ಭಸ್ಮಡ್ಕದಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಕಾಸರಗೋಡು ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜೀರ್ಪಳ್ಳ ಧರ್ಮನಗರದ ಸಮೀರ್(26) ಮೃತಪಟ್ಟ ಯುವಕ. ಸುಳ್ಯದ ಕುರುಂಜಿಬಾಗ್ನಲ್ಲಿರುವ
ವಿಶನ್ ಆಪ್ಟಿಕಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸುಳ್ಯದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು.ಇಂದು ರಜೆ ಇದ್ದ ಹಿನ್ನಲೆಯಲ್ಲಿ ಬಟ್ಟೆ ತೊಳೆಯಲು ಮತ್ತು ಸ್ನಾನಕ್ಕೆಂದು ಇತರ ಇಬ್ಬರು ಯುವಕರ ಜೊತೆ ನದಿಗೆ ಬಂದಿದ್ದರು. ಈ ಸಂದರ್ಭ ಸಮೀರ್ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ಪೊಲೀಸ್, ಅಗ್ನಿಶಾಮಕ ದಳ, ಮುಳುಗು ತಜ್ಞರು ಶೋಧ ನಡೆಸಿ ಮೃತ ದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದರು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು.









