ಸುಳ್ಯ: ಸುಳ್ಯದ ರಂಗ ಮಯೂರಿ ಕಲಾಶಾಲೆಯ ವತಿಯಿಂದ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು. ಖ್ಯಾತ ಕಲಾವಿದರು ಪ್ತಸ್ತುತಪಡಿಸಿದ ಭಕ್ತ ಸುಧನ್ವ (ಕವಿ : ಮೂಲಿಕೆ ರಾಮಕೃಷ್ಣಯ್ಯ) ಎಂಬ ಪ್ರಸಂಗ ನೆರೆದವರ ಮನಸೂರೆಗೊಂಡಿತು.
ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಹಿರಿಯ ಕಲಾವಿದರಾದ
ಸುಬ್ರಾಯ ಸಂಪಾಜೆಯವರು ತನ್ನ ಶಬ್ದ ಗಾಂಭೀರ್ಯ ಮತ್ತು ಸ್ವರ ಮಾಧುರ್ಯದಿಂದ ಪ್ರೇಕ್ಷಕರ ಹೃದಯ ಗೆದ್ದರೆ,ಚೆಂಡೆ ವಾದಕರಾಗಿ ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ ಮದ್ದಳೆ ವಾದಕರಾಗಿ ಶ್ರೀಧರ ವಿಟ್ಲ ವಿಜ್ರಂಭಿಸಿದರು.ಅರ್ಥದಾರಿಗಳಾಗಿ ಹಿರಿಯ ಕಲಾವಿದರು ತಮ್ಮ ಶಬ್ದದ ಮೂಲಕ ಜೀವ ತುಂಬಿದರು.ಸುಧನ್ವನ ಪಾತ್ರದಲ್ಲಿ ರಾಧಾಕೃಷ್ಣ ಕಲ್ಚಾರ್, ಶ್ರೀಕೃಷ್ಣನ ಪಾತ್ರದಲ್ಲಿ ವೆಂಕಟ್ರಾಮ ಭಟ್ ಸುಳ್ಯ, ಅರ್ಜುನನಾಗಿ ಜಬ್ಬಾರ್ ಸಮೋ ಸಂಪಾಜೆ ಅವರ ಮಾತಿನ ಜುಗಲ್ಬಂಧಿ ನೆರೆದ ಪ್ರೇಕ್ಷಕರಿಗೆ ರಸಾನುಭವ ನೀಡಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ರಂಗಮಯೂರಿ ಕಲಾ ಶಾಲೆಯ ವತಿಯಿಂದ ಕಾರ್ಯಕ್ರಮ ನಡೆಯಿತು.