ಸುಳ್ಯ:ತೆಂಕು ತಿಟ್ಟು,ಬಡಗು ತಿಟ್ಟು ಒಟ್ಟಾಗಿ ಯಕ್ಷಗಾನವು ರಾಜ್ಯ ಕಲೆಯಾಗಿ ಬೆಳಗಬೇಕು. ಅದಕ್ಕಾಗಿ ಎರಡೂ ತಿಟ್ಟನ್ನು ಒಂದುಗೂಡಿಸಿ ಕೇರಳದ ಕಲಾಮಂಡಲಂ ರೀತಿಯಲ್ಲಿ ಒಂದು ಯಕ್ಷ ಕಲಾ ಮಂಡಲ ಸ್ಥಾಪನೆ ಆಗಿ ಯಕ್ಷಗಾನ ಕಲಿಸುವಂತಾಗಬೇಕು ಎಂದು ಹಿರಿಯ ಸಾಹಿತಿಗಳು ಮತ್ತು ಯಕ್ಷಗಾನ ಕಲಾವಿದರಾದ ಡಾ ಪ್ರಭಾಕರ ಶಿಶಿಲ ಹೇಳಿದ್ದಾರೆ.ಸುಳ್ಯದ ರಂಗ ಮಯೂರಿ ಕಲಾಶಾಲೆಯ ವತಿಯಿಂದ ನಡೆದ ‘ಯಕ್ಷಗಾನದ ಒಂದು ಅವಲೋಕನ’ ಯಕ್ಷಗಾನ ಗೋಷ್ಠಿಯ
ಅಧ್ಯಕ್ಷತೆ ವಹಿಸಿ ವಹಿಸಿ’ಯಕ್ಷಗಾನದ ಬೆಳವಣಿಗೆಯಲ್ಲಿ ಸಹಭಾಗಿತ್ವ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿ ಮಾತನಾಡಿದರು.ಮೇಳಗಳು ಹುಟ್ಟಿಕೊಳ್ಳುವುದರ ಜೊತೆಗೆ ಕಲಾವಿದರನ್ನು ಸೃಷ್ಠಿಸುವ ಕೆಲಸ ಆಗಬೇಕು.ನಮ್ಮ ಕಲೆ ಎಂಬ ಆತ್ಮೀಯತೆ, ಹಂಬಲ ಬೇಕು. ಅದಕ್ಕಾಗಿ ಸರಕಾರ, ಖಾಸಗೀ ಸಹಭಾಗಿತ್ವ ಬೇಕು ಎಂದು ಹೇಳಿದರು.
’ಯಕ್ಷಗಾನವನ್ನು ತಲೆಮಾರಿಗೆ ವರ್ಗಾಯಿಸುವ ಸಾಧ್ಯತೆಗಳು’ ಎಂಬ ವಿಚಾರದ ಬಗ್ಗೆ ವಿಚಾರ ಮಂಡಿಸಿದ ಲೇಖಕರು ಹಾಗೂ ಸಂಶೋಧಕರಾದ ಡಾ.ಸುಂದರ ಕೇನಾಜೆ ಮಾತನಾಡಿ ‘ಶಾಸ್ತ್ರೀಯ ಮತ್ತು ಔಪಚಾರಿಕ ನೆಲೆಯಲ್ಲಿ ಬೆಳೆಸಿದರೆ ಮಾತ್ರ ಕಲೆಯು ಬೆಳೆಯುತ್ತದೆ. ಆದುದರಿಂದ ಯಕ್ಷ ಶಿಕ್ಷಣ ಜಾರಿಯಾಗಿ ಶಾಸ್ತ್ರೀಯವಾಗಿ ಮತ್ತು ಔಪಚಾರಿಕವಾಗಿ ಕಲಿಸಿದರೆ ಮಾತ್ರ ಯಕ್ಷಗಾನ ಉಳಿಯುತ್ತದೆ ಎಂದು ಹೇಳಿದರು.ಜನಪದೀಯ ನೆಲೆಯಲ್ಲಿ ತಲೆಮಾರಿನಿಂದ ಯಕ್ಷಗಾನ ಹರಿದು ಬಂದಿದೆ.ಆದರೆ ಕಲೆಯ
ಉಳಿವಿಗೆ ಮತ್ತು ಬೆಳವಣಿಗೆಗೆ ಇವತ್ತಿನ ಕಾಲ ಘಟ್ಟಕ್ಕೆ ಸರಿಯಾಗಿ ಕಲಿಸಬೇಕು. ಅದಕ್ಕಾಗಿ ಯಕ್ಷ ಶಿಕ್ಷಣ ಜಾರಿಯಾಗಬೇಕು ಮತ್ತು ಕೇರಳದ ಕಲಾಮಂಡಲಂ ಮಾದರಿಯಲ್ಲಿ ಯಕ್ಷಗಾನ ಕಲಿಕಾ ಕೇಂದ್ರಗಳು ಸ್ಥಾಪನೆಯಾಗಬೇಕು. ಅಕಾಡೆಮಿಗಳು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಲೆಯ ಬೆಳವಣಿಗೆಗೆ ಡಿಜಿಟಲ್ ಮಾಧ್ಯಮಗಳನ್ನು ಬಳಸಬೇಕು ಎಂದ ಅವರು ಯಕ್ಷಗಾನ ದಕ್ಷಿಣ ಭಾರತದ ಕಲೆ, ಇದು ಕೇವಲ ಕರಾವಳಿಗೆ ಸೀಮಿತ ಅಲ್ಲ. ಯಕ್ಷಗಾನ ಕಲೆಗೆ ಸಂಬಂಧ ಇರುವ ಹಲವು ಕಲೆಗಳು ಇದೆ. ಅದಕ್ಕೆ ಬಹಳ ದೊಡ್ಡ ಪರಂಪರೆ ಇದೆ ಎಂದು ಡಾ.ಕೇನಾಜೆ ಹೇಳಿದರು.
‘ಯಕ್ಷಗಾನ ಸಂಘಟನೆಯ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದ ಯಕ್ಷಗಾನ ಕಲಾವಿದರು ಹಾಗೂ ಸಂಘಟಕರಾದ ನಾರಾಯಣ ದೇಲಂಪಾಡಿ ‘ಯಕ್ಷ ಸಂಘಟನೆ ವಿಶಾಲವಾದ ವ್ಯಾಪ್ತಿಯನ್ನು ಒಳಗೊಂಡಿದೆ. ಕಲೆಯ ಪ್ರೀತಿಯಿಂದ ಮೇಳಗಳು ನಡೆಯುತ್ತವೆಯೇ ಹೊರತು ಲಾಭದಾಯಕವಾಗಿಲ್ಲ ಎಂದು ಹೇಳಿದರು. ಆರ್ಥಿಕ ಲಾಭದಿಂದ ಮೇಳಗಳನ್ನು ಕೊಂಡೊಯ್ಯುವುದು ಬಹಳ ಕಷ್ಟ.ಯಕ್ಷಗಾನಕ್ಕೆ ತಾರಾ ಮೌಲ್ಯ ಬಂದಿದ್ದರೂ ಮೂಲಭೂತ ಚೌಕಟ್ಟನ್ನು ಉಳಿಸಿಕೊಂಡು ಮುಂದೆ ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಸದಭಿರುಚಿಯ ಉತ್ತಮ ಆಟಗಳಿಗೆ ಪ್ರೇಕ್ಷಕರು ಬಂದೇ ಬರುತ್ತಾರೆ ಕಲಾವಿದರಿಗೆ ನೀತಿ ಸಂಹಿತೆ, ಸಂಭಾವನೆಗೆ ಗ್ರೇಡ್ ನಿರ್ಣಯ ಮಾಡುವುದು, ಆಟಗಳ ಖರ್ಚು ಕಡಿಮೆ ಮಾಡುವುದು ಅತೀ ಅಗತ್ಯವಾಗಿದೆ.ಪರಂಪರೆಯನ್ನು ಉಳಿಸಿ ಯಕ್ಷಗಾನದಲ್ಲಿ ಬದಲಾವಣೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸುಳ್ಯದ ರಂಗಮಯೂರಿ ಕಲಾ ಶಾಲೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ನಡೆದ ಯಕ್ಷಗಾನ ಕವಿಗೋಷ್ಠಿಯನ್ನು ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಅವರು ಉದ್ಘಾಟಿಸಿದರು.ಪೋಷಕ ಕಮಿಟಿ ಸದಸ್ಯ ಭವಾನಿ ಶಂಕರ ಅಡ್ತಲೆ,ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.