ಹೊಸದಿಲ್ಲಿ: ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ ಭರ್ಜರಿ ಗೆಲವಿನೊಂದಿಗೆ ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದು ಕೊಂಡಿತು.ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 114 ರನ್ ಗಳ ಸಾಧಾರಣ ಮೊತ್ತ ಬೆನ್ನತ್ತಿದ
ಅರ್ಸಿಬಿ ತಂಡವು 19.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು115 ರನ್ ಗಳಿಸಿ 8 ವಿಕೆಟ್ ಗಳ ಅಂತರದಿಂದ ಜಯಭೇರಿ ಭಾರಿಸಿತು.
ಆರ್ಸಿಬಿ ಪರ ಎಲ್ಲೀಸ್ ಪೆರಿ ಅಜೇಯ 35, ನಾಯಕಿ ಸ್ಮೃತಿ ಮಂದಾನ 31, ಸೋಫಿ ಡಿವೈನ್ 32 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 18.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಯಿತು.
ಡೆಲ್ಲಿ ಪರ ಆಕ್ರಮಣಕಾರಿಯಾಗಿ ಆಡಿದ ಶಫಾಲಿ ವರ್ಮಾ ಕೇವಲ 27 ಎಸೆತಗಳಲ್ಲಿ 44 ರನ್ ಗಳಿಸಿದರು. ಇದರಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಒಳಗೊಂಡಿತ್ತು. ಮತ್ತೊಂದೆಡೆ ನಾಯಕಿ ಮೆಗ್ ಲ್ಯಾನಿಂಗ್ ಮೂರು ಬೌಂಡರಿಗಳ ನೆರವಿನಿಂದ 23 ರನ್ ಗಳಿಸಿದರು.ಈ ಹಂತದಲ್ಲಿ ದಾಳಿಗೆ ಇಳಿದ ಸೋಫಿ ಮಾಲಿನೆ ಒಂದೇ ಓವರ್ನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಆರ್ಸಿಬಿ ಪರ ಶ್ರೇಯಾಂಕಾ ಪಾಟೀಲ 3.3 ಓವರ್ಗಳಲ್ಲಿ 12 ರನ್ಗೆ ನಾಲ್ಕು ವಿಕೆಟ್ ಕಬಳಿಸಿದರು. ಆಶಾ ಶೋಭನಾ ಎರಡು ವಿಕೆಟ್ ಗಳಿಸಿ ಮಿಂಚಿದರು.
ಪರಿಣಾಮ ಡೆಲ್ಲಿ 18.3 ಓವರ್ಗಳಲ್ಲಿ 113 ರನ್ಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.









