ವಡೋದರ:ಆಲ್ರೌಂಡ್ ಆಟ ಆಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ 7 ವಿಕೆಟ್ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.ಅದರೊಂದಿಗೆ ಲೀಗ್ನಲ್ಲಿ ಸತತ ನಾಲ್ಕನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿತು. ಟಾಸ್ ಗೆದ್ದ ಡೆಲ್ಲಿ ತಂಡದ
ನಾಯಕಿ ಜೆಮಿಮಾ ರಾಡ್ರಿಗಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟರ್ ಬೆತ್ ಮೂನಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಗುಜರಾತ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 168 ರನ್ ಗಳಿಸಿತು.ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 15.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 169 ರನ್ ಗಳಿಸಿ, ಸುಲಭವಾಗಿ ಗುರಿ ತಲುಪಿತು.
ಡೆಲ್ಲಿ ತಂಡಕ್ಕೆ ಲಿಜೆಲ್ ಲೀ (43; 24ಎ, 4×8, 6×1) ಹಾಗೂ ಶಫಾಲಿ ವರ್ಮಾ (31; 21ಎ, 4×7) ಅವರು ಮೊದಲ ವಿಕೆಟ್ಗೆ 89 ರನ್ ಗಳಿಸಿ, ಭದ್ರ ಬುನಾದಿ ಹಾಕಿಕೊಟ್ಟರು.
ನಂತರ ಲಾರಾ ವೋಲ್ವಾರ್ಟ್ (ಔಟಾಗದೇ 32; 24ಎ, 4×2, 6×1) ಹಾಗೂ ನಾಯಕಿ ಜೆಮಿಮಾ (41; 23ಎ, 4×4, 6×1) ಜವಾಬ್ದಾರಿಯುತ ಬ್ಯಾಟಿಂಗ್ನೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇವರಿಬ್ಬರು ಮೂರನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಸೇರಿಸಿದರು.
ಇದಕ್ಕೆ ಮೊದಲು, ಸ್ಪಿನ್ನರ್ ನಂದನಿ ಶರ್ಮಾ (44ಕ್ಕೆ2) ಮತ್ತು ಶಿನೆಲ್ ಹೆನ್ರಿ (35ಕ್ಕೆ3) ಅವರು ಪರಿಣಾಮಕಾರಿ ಬೌಲಿಂಗ್ ಗುಜರಾತ್ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಬೆತ್ ಮೂನಿ (ಔಟಾಗದೇ 62; 51ಎ, 4X6) ಅವರ ದಿಟ್ಟ ಆಟವು ತಂಡಕ್ಕೆ ನೆರವಾಯಿತು.ಮೂನಿ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ ಜಾರ್ಜಿಯಾ ವೆರ್ಹಾಮ್ (35; 25ಎ, 4X3, 6X1) ಅವರೊಂದಿಗೆ 61 ರನ್ ಸೇರಿಸಿದರು. ಇದು ತಂಡಕ್ಕೆ ಚೇತೋಹಾರಿಯಾಯಿತು.
ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿರುವ ಡೆಲ್ಲಿ ಪಡೆಗೆ ಇದು ಸತತ ನಾಲ್ಕನೇ ಫೈನಲ್. ಈ ತಂಡ ಹಿಂದಿನ ಮೂರು ಆವೃತ್ತಿಗಳಲ್ಲಿಯೂ ಅಂತಿಮ ಹಂತ ತಲುಪಿತ್ತು. ಆದರೆ, ಒಮ್ಮೆಯೂ ಟ್ರೋಫಿ ಮುಡಿಗೇರಿಸಿಕೊಂಡಿಲ್ಲ. ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಜೆಮಿಮಾ ಪಡೆಗೆ, ಸ್ಮೃತಿ ಮಂದಾನ ನಾಯಕಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸವಾಲೊಡ್ಡಲಿದೆ. ಇದೇ ಕ್ರೀಡಾಂಗಣದಲ್ಲಿ ಗುರುವಾರ (ಫೆಬ್ರುವರಿ 5ರಂದು) ಫೈನಲ್ನ ನಡೆಯಲಿದೆ.





