ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಬೆಳಿಗ್ಗೆಯಿಂದ ನಡೆದ ಸುದೀರ್ಘ ಚರ್ಚೆ ಬಳಿಕ ನಡೆದ ಮತದಾನದಲ್ಲಿ ಮಸೂದೆ ಪರ 454 ಮತಗಳು ಬಿದ್ದರೆ, ಇಬ್ಬರು ಸಂಸದರು ಮಸೂದೆ ವಿರುದ್ಧ ಮತ ಚಲಾಯಿಸಿದ್ದಾರೆ.
ಮಹಿಳೆಯರಿಗೆ ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು
ಕೇಂದ್ರ ಕಾನೂನು ಸಚಿವ ಅರ್ಜುನ್ ಸಿಂಗ್ ಮೇಘವಾಲ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಗೆ ‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂದು ಹೆಸರಿಡಲಾಗಿದ್ದು, ‘ಈ ಮಸೂದೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ’ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಸೇರಿದಂತೆ ಬಹುತೇಕ ಪಕ್ಷಗಳು ಮಸೂದೆಯನ್ನು ಬೆಂಬಲಿಸಿವೆ.
ದೆಹಲಿ ಸೇರಿದಂತೆ ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕು. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.ಹೊಸ ಕೋಟಾ ನಿಗದಿಗೆ ಸಂಬಂಧಿಸಿದ ಕಾನೂನು ಜಾರಿಗೆ ಬಂದ ನಂತರ ನಡೆಸಲಾಗುವ ಮೊದಲ ಜನಗಣತಿಯ ಅಂಕಿಅಂಶಗಳನ್ನು ಪರಿಗಣಿಸಿ ನಡೆಸುವ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕವಷ್ಟೇ ಹೊಸ ಕೋಟಾ ಅಸ್ತಿತ್ವಕ್ಕೆ ಬರುತ್ತದೆ. ಮಹಿಳೆಯರಿಗೆ ಕಾಯ್ದಿರಿಸಿದ ಸ್ಥಾನಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸುವ ದಿನಾಂಕದವರೆಗೆ ಮುಂದುವರಿಯುತ್ತದೆ. ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಿದಂತೆ ಪ್ರತಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಹಿಳೆಯರಿಗೆ ಮೀಸಲಿಟ್ಟ ಸ್ಥಾನಗಳ ರೊಟೇಷನ್ ಜಾರಿಗೆ ಬರುತ್ತದೆ. 2029ರ ವೇಳೆಗೆ ಅನುಷ್ಠಾನವಾಗಬಹುದು.
ಜನಗಣತಿ ಪೂರ್ಣಗೊಂಡ ಬಳಿಕ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಲಾಗುತ್ತದೆ.









