ಮಂಡೆಕೋಲು: ವನ್ಯ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಬೃಹತ್ ಹೋರಾಟ ನಡೆಸಲು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ
ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು.
ಅರಣ್ಯದಂಚಿನಲ್ಲಿರುವ ಮಂಡೆಕೋಲು ಗ್ರಾಮದಲ್ಲಿ ವನ್ಯಪ್ರಾಣಿಗಳ ಹಾವಳಿ ನಿರಂತರ ಹೆಚ್ಚಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪೂರ್ಣ ಪ್ರಮಾಣದಲ್ಲಿ ಸೋಲಾರ್ ಪೆನ್ಸಿಂಗ್ ಅಳವಡಿಸಬೇಕು, ಮಂಗಗಳ ಹಾವಳಿ ತಡೆಗೆ ಕೇರಳ ಮಾದರಿಯಲ್ಲಿ ಸಂತಾನಹರಣ ಚಿಕಿತ್ಸೆ ಮಾಡಲು ಕ್ರಮಕೈಗೊಳ್ಳಬೇಕು, ಕಾಡಾನೆ ಹಾವಳಿ ತಡೆಗೆ ಶಾಶ್ವತ ರೀತಿಯ ಯೋಜನೆ ರೂಪಿಸಿ ಪರಿಹಾರ ಒದಗಿಸಿ ಗ್ರಾಮಸ್ಥರ, ಗ್ರಾಮದ ಕೃಷಿಕರ, ರೈತರ ಹಿತ ಕಾಯಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಸಲಹೆ- ಸೂಚನೆಗಳನ್ನು ನೀಡಿದರು.
ವನ್ಯ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸಲಾಗಿದ್ದರೂ ಅರಣ್ಯ ಇಲಾಖೆ, ಸಂಬಂಧಿಸಿದವರು ಸ್ಪಂದನೆ ನೀಡುತ್ತಿಲ್ಲ ಎಂದು ಅಸಮಾಧಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ನ.24ರಂದು ಮಂಡೆಕೋಲು ಗ್ರಾಮ ಪಂಚಾಯತ್ ಬಳಿ ಗ್ರಾಮಸ್ಥರೆಲ್ಲರೂ ಸೇರಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರತಿಭಟನೆಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಆಗಮಿಸಿ ಅಹವಾಲು ಆಲಿಸಿ, ಪರಿಹಾರ ಕಲ್ಪಿಸಬೇಕು. ಇಲ್ಲವೇ ಅನಿರ್ದಿಷ್ಟಾವಽ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಬಾಲಚಂದ್ರ ಡಿ.ಸಿ., ರಾಮಚಂದ್ರ ಮಾಸ್ಟರ್, ಶ್ರೀಹರಿ ಬೊಳುಗಲ್ಲು, ಉದಯ ಕುಮಾರ್ ಸೇರಿದಂತೆ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.





