ಸುಳ್ಯ:ರಾಜ್ಯದ ವಿವಿಧೆಡೆ ತಾಪಮಾನ ಕುಸಿತದಿಂದ ಚಳಿ ಹೆಚ್ಚಾಗುತ್ತಿದ್ದು, ಸುಳ್ಯದ ವಿವಿಧ ಭಾಗಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಕಳೆದ 2-3 ದಿನಗಳಿಂದ ರಾತ್ರಿ ಮತ್ತು ಬೆಳಗ್ಗಿನ ಜಾವ ಮೈ ನಡುಗುವ ಚಳಿಯಾಗುತಿದ್ದು ಬೆಳಗ್ಗಿನ ಜಾವಾ ಎಲ್ಲೆಡೆ ಮಂಜು ಕವಿದ ವಾತಾವತಣ ಇತ್ತು. ಡಿ.16 ರಿಂದ ಕನಿಷ್ಠ ತಾಪಮಾನ 2ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆಯಿದೆ ಎಂದು
ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಚುಮು ಚುಮು ಚಳಿ ಹಾಗೂ ದಟ್ಟ ಮಂಜು ಎಲ್ಲೆಡೆ ಮುತ್ತಿಕೊಂಡಿತು. ಪರಸ್ಪರ ಕಾಣದಷ್ಟು ಪರಿಸರವನ್ನು ಮಬ್ಬಾಗಿಸಿತ್ತು. ಬೆಳಿಗ್ಗೆ ವಾಯು ವಿಹಾರ, ವಾಕಿಂಗ್, ಜಾಗಿಂಗ್ ಹೊರಟವರಿಗೆ ಬೆಳಗಿನ ಮಂಜಿನ ಚೆಲ್ಲಾಟ, ಚುಮು ಚುಮು ಚಳಿ ಮುದ ನೀಡಿತು.
ಮುಂಜಾನೆಯಿಂದಲೂ ಮಂಜು ಕವಿದದಿದ್ದು 8 ಗಂಟೆಯವರೆಗೂ ದಟ್ಟವಾಗಿ ಹರಡಿತ್ತು. ಸುತ್ತಲೂ ಬಿಳಿ ಮಂಜು ಆವರಿಸಿ ಪರಿಸರವಿಡೀ ಹಾಲ್ನೊರೆ ಸುರಿದಂತೆ ಭಾಸವಾಗುತ್ತಿತ್ತು.
ನಿನ್ನೆ ಮೊನ್ನೆ ತನಕ ಮೋಡ, ಮಳೆಯ ವಾತಾವರಣ ಇದ್ದು ಇದೀಗ ಎತಡು ದಿನಗಳಿಂದ ಮಂಜು ಆವರಿಸಿ ಪರಿಸರವಿಡೀ ಅಪರೂಪದ ದೃಶ್ಯ ಕಾವ್ಯ ಸೃಷ್ಠಿಸಿತು. ಮಂಜಿನ ವಾತಾವರಣದಿಂದ ಬೆಳಗ್ಗೆ ಸುಳ್ಯ ಸುಂದರವಾಗಿ ಕಾಣುತ್ತಿತ್ತು. ನಸುಕಿನ ವೇಳೆ ಇಡೀ ಸುಳ್ಯ ಮಂಜಿನ ನಗರಿಯಾಗಿ ಮಾರ್ಪಾಡಾಗಿತ್ತು.
ಸುಳ್ಯ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ಎರಡು ಮೂರು ದಿನಗಳಿಂದ ರಾತ್ರಿ ಹಾಗೂ ಬೆಳಿಗ್ಗೆ ಚಳಿಯ ವಾತಾವರಣ ಇದೆ.ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗು ಗಡಿ ಗ್ರಾಮಗಳಲ್ಲಿ ಚಳಿಯ, ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿದ್ದು ಮುಂಜಾನೆ ದಟ್ಟ ಮಂಜು ಹಾಗೂ ಚಳಿಯ ವಾತಾವರಣ ಕಂಡು ಬಂದಿದೆ.