ಸುಳ್ಯ:ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ರೈತ ಹಿತಾ ರಕ್ಷಣಾ ವೇದಿಕೆ ಕೊಲ್ಲಮೊಗ್ರು-ಕಲ್ಮಕಾರು, ರೈತ ಸಂಘ ಸುಳ್ಯ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಸುಳ್ಯ ತಾಲೂಕು ಮಟ್ಟದಲ್ಲಿ ನಡೆಯುವ ಪಶ್ಚಿಮ ಘಟ್ಟಗಳ ಜ್ವಲಂತ ಸಮಸ್ಯೆ ಹಾಗೂ ಪರಿಹಾರಗಳ ಸಮಾಲೋಚನಾ ಸಭೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನಡೆಯಿತು.ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಪ್ರದೀಪ್ ಕುಮಾರ್ ಕೆ.ಎಲ್. ಮಾತನಾಡಿ, ಪಶ್ಚಿಮ ಘಟ್ಟಗಳ ಜ್ವಲಂತ ಸಮಸ್ಯೆಗಳ
ಪರಿಹಾರಗಳನ್ನು ನಿವಾರಿಸಿ ಈ ಭಾಗದ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೊದಲನೆಯದಾಗಿ ಕಾನೂನು ಮೂಲಕ ಸಲಹೆ ಪಡೆದು ಅದರಂತೆ ಹೋರಾಟ ನಡೆಸುವುದು, ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸಿ ಅದರ ಮೂಲಕ ಗ್ರಾಮದ ಜನರಿಗೆ ಸಮಸ್ಯೆಗಳ ತೀವ್ರತೆಯನ್ನು ತಿಳಿಸಿ ಒಟ್ಟುಗೂಡಿಸುವುದು. ಸಮಸ್ಯೆ ಬಾಧಿತ ಪ್ರದೇಶದ ಶಾಸಕರು, ಸಂಸದರನ್ನು ಸೇರಿಸಿಕೊಂಡು ಅವರಿಗೆ ನಮ್ಮ ಬೇಡಿಕೆಗಳನ್ನು ತಿಳಿಸಿ ಸರಕಾರದ ಮಟ್ಟಕ್ಕೆ ಬೇಡಿಕೆಗಳನ್ನು ತಲುಪಿಸಿ, ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಮೂಲಕ ಹೋರಾಟ ನಡೆಯಲಿದೆ ಎಂದು
ಹೇಳಿದರು. ಕಾನೂನು ತಜ್ಞರ ಸಲಹೆಗಳನ್ನು ಪಡೆದು ಅಲ್ಲಿ ವ್ಯಕ್ತವಾಗುವ ಬೇಡಿಕೆಗಳನ್ನು ಆಯಾ ಗ್ರಾ.ಪಂ.ಗೆ ಸಲ್ಲಿಸುವುದು, ವಿಶೇಷ ಗ್ರಾಮ ಸಭೆಗಳಲ್ಲಿ ಚರ್ಚಿಸುವ ಬಗ್ಗೆ ತಿಳಿಸಿದರು. ಅರಣ್ಯದಂಚಿನ,ಪಶ್ಚಿಮ ಘಟ್ಟದ ರೈತರು, ಜನರನ್ನು ಸಮಸ್ಯೆಯಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಪ್ರಥಮವಾಗಿ ಪಶ್ಚಿಮ ಘಟ್ಟದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೋರಾಟದ ಮೂಲಕ ಸಾಧ್ಯ ಎಂದರು.
ಅರಣ್ಯ ಪ್ರದೇಶ ಮತ್ತು ಕಂದಾಯ ಗ್ರಾಮಗಳ ಸಮಸ್ಯೆ, ಅರಣ್ಯ-ಕಂದಾಯ ಕಾನೂನು, ಗ್ರಾ.ಪಂ.ಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸುವುದು, ಪಶ್ಚಿಮ ಘಟ್ಟದ ಸಂಸಧೀಯ ಹಾಗೂ ಶಾಸಕಾಂಗದ ಸದಸ್ಯರ ಒಟ್ಟುಗೂಡಿಸುವಿಕೆ, ಬದುಕುವ ಹಕ್ಕು, ಸ್ವಾತಂತ್ರ್ಯ, ಅರಣ್ಯ ಹಕ್ಕುಗಳ ಪ್ರತಿಷ್ಠಾಪನೆಗೆ ಅನುಷ್ಠಾನ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಊರವರು ಒಟ್ಟಾಗಿ ಹೋರಾಟ ನಡೆಸುವ ಅನಿವಾರ್ಯ ಇಲ್ಲಿದೆ, ರಾಜಕೀಯ ರಹಿತವಾಗಿ ಹೋರಾಟ ನಡೆಸಿದಲ್ಲಿ ಯಶಸ್ಸು ಸಾಧ್ಯ ಎಂದು ಸಭೆಯಲ್ಲಿ ಸಲಹೆ ವ್ಯಕ್ತವಾಯಿತು. ರೈತರು, ಗ್ರಾಮಸ್ಥರು ಹೋರಾಟದಲ್ಲಿ ಹೆಚ್ಚು ಸೇರಿಕೊಂಡು ನಮ್ಮ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳಬೇಕು, ಹೋರಾಟದಲ್ಲಿ ಇರುವವರು ರಾಜಕೀಯದಿಂದ ದೂರ ಇರಬೇಕು, ನಮ್ಮ ಬೇಡಿಕೆಗಳು, ಸಮಸ್ಯೆಗಳ ಬಗ್ಗೆ ವರದಿ ತಯಾರಿಸಿ ಅದನ್ನು ಜಾರಿ ಮಾಡುವಂತೆ ಒತ್ತಾಯಿಸುವುದು, ವಿರೋಧ ಮಾಡುವ ಜನರನ್ನು ಮನವೊಲಿಸಿ ಹೋರಾಟದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಸೇರಿದಂತೆ ವಿವಿಧ ಸಲಹೆ-ಸೂಚನೆಗಳನ್ನು ಸಭೆಯಲ್ಲಿ ಭಾಗವಹಿಸಿದವರು ನೀಡಿದರು. ಹೋರಾಟದಲ್ಲಿ ವಿವಿಧ ಸಂಘಟನೆಗಳನ್ನು ಸಂಯುಕ್ತವಾಗಿ ಸೇರಿಸಿಕೊಂಡು ಹೋರಾಟ ಮುಂದುವರಿಸಿಕೊಂಡು ಹೋಗುವ ಬಗ್ಗೆಯೂ ಚರ್ಚೆ ನಡೆಯಿತು. ಸಭೆಯಲ್ಲಿ ವಿವಿಧ ಸಲಹಾ ಸಮಿತಿ ರಚಿಸುವ ಬಗ್ಗೆ ತೀರ್ಮಾನಿಸಲಾಯಿತು, ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಹಿರಿಯ ಪ್ರಗತಿಪರ ಕೃಷಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಜಾಕೆ ಮಾದವ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲಮೊಗ್ರು-ಕಲ್ಮಕಾರು ರೈತ ಹಿತ ರಕ್ಷಣಾ ವೇದಿಕೆಯ ಹಮೀದ್ ಇಡ್ನೂರು, ಪ್ರಗತಿಪರ ಕೃಷಿಕ ಗದಾಧರ ಮಲ್ಲಾರ, ರೈತ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಸೇರಿದಂತೆ ರೈತ, ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಹಮೀದ್ ಸ್ವಾಗತಿಸಿದರು. ಬಾಲಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.