ವಯನಾಡ್: ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲದಲ್ಲಿ ಸಂಭವಿಸಿರುವ ಭೀಕರ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಮೃತರ ಸಂಖ್ಯೆ 250ಕ್ಕೂ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇನ್ನೂ 200 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.200ಕ್ಕೂ ಅಧಿಕ ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಹವಾಮಾನ ಪರಿಸ್ಥಿತಿ, ಕೆಸರು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿವೆ. ಕೆಸರು ತುಂಬಿದ ಮನೆಗಳಲ್ಲಿ ನಡೆಯುತ್ತಿರುವ
ಕಾರ್ಯಾಚರಣೆ ರಕ್ಷಣಾ ಸಿಬ್ಬಂದಿಯನ್ನು ಆಘಾತಕ್ಕೀಡುಮಾಡಿದೆ. ಕೆಲವರು ಮಲಗಿದ ಸ್ಥಿತಿಯಲ್ಲಿ ಕುರ್ಚಿ ಮೇಲೆ ಕುಳಿತ ಸ್ಥಿತಿಯಲ್ಲೇ ಜೀವ ಕಳೆದುಕೊಂಡಿದ್ದಾರೆ. ಬದುಕುಳಿಯಲು ಓಡಿಹೋಗಲು ಯತ್ನಿಸಿದವರ ದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಕೆಲವು ಕುಟುಂಬಗಳೇ ಸಂಪೂರ್ಣವಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಹಲವು ಕುಟುಂಬಗಳಲ್ಲಿ ಒಬ್ಬರು ಅಥವಾ ಇಬ್ಬರಷ್ಟೇ ಉಳಿದುಕೊಂಡಿದ್ದಾರೆ.
ಮುಂಡಕ್ಕೈಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕುಸಿದಿದೆ. ಹೀಗಾಗಿ, ಭೂಕುಸಿತದ ಕೇಂದ್ರ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನದ ನಂತರ ಯಾಂತ್ರೀಕೃತ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಣಾ ಸಿಬ್ಬಂದಿ ನಿರ್ಮಿಸಿರುವ ತಾತ್ಕಾಲಿಕ ಮಾರ್ಗವೂ ಮುಳುಗಡೆಯಾಗಿದ್ದು, ಮತ್ತೊಂದು ಭೂಕುಸಿತದ ಆತಂಕ ಸೃಷ್ಟಿಸಿದೆ. ಸೇನೆ ಬೈಲಿ ಬ್ರಿಡ್ಜ್ ನಿರ್ಮಿಸುವ ಕಾರ್ಯ ನಡೆಸಿದ್ದು ಇಂದಿನಿಂದ ಕಾರ್ಯಾಚರಣೆಗೆ ಇನ್ನಷ್ಟು ವೇಗ ಹೆಚ್ಚುವ ನಿರೀಕ್ಷೆ ಇದೆ. ವಯನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿರುವ ಮುಂಡಕ್ಕೈ, ಚೂರಲ್ಮಲ ಮತ್ತು ಅಟ್ಟಮಲದಲ್ಲಿ ಭೂಕುಸಿತ ಸಂಭವಿಸಿರುವ ಸ್ಥಳದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಪಕ್ಕದ ಮಲಪ್ಪುರಂ ಜಿಲ್ಲೆಯ ಪೋಥುಕಲ್ನಲ್ಲಿ ಚಾಲಿಯಾರ್ ನದಿಯಲ್ಲಿ ಕೊಚ್ಚಿ ಹೋದ 70ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ.
ಅವಶೇಷಗಳಲ್ಲಿ ಶವಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚಲು ಶ್ವಾನದಳ ಮತ್ತು ತಂತ್ರಜ್ಞಾನದ ಮೊರೆ ಹೋಗಲಾಗಿದೆ.
ನಾಪತ್ತೆಯಾಗಿರುವವರಲ್ಲಿ ಕೆಲವರು ಸಂವಹನ ಸೌಕರ್ಯವಿಲ್ಲದ ಸ್ಥಳದಲ್ಲಿ ಸಿಲುಕಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ. ಭೂಕುಸಿತದ ಪ್ರದೇಶದಲ್ಲಿ ಸಿಲುಕಿದ್ದ 599 ಮಹಿಳೆಯರು, 299 ಮಕ್ಕಳು ಸೇರಿದಂತೆ ಒಟ್ಟು 1,386 ಮಂದಿಯನ್ನು ಸುರಕ್ಷಿತ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುತು ಪತ್ತೆಯಾದ ಶವಗಳನ್ನು ಸಂಬಂಧಿಕರಿಗೆ ನೀಡುವ ಕಾರ್ಯವನ್ನು ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತ್ವರಿತಗೊಳಿಸಿದ್ದಾರೆ.
ಗುಡ್ಡಕುಸಿತ ಮತ್ತು ಪ್ರವಾಹದಲ್ಲಿ ಕೊಚ್ಚಿಹೋದ ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲದ ಎಲ್ಲೆಡೆ ಭೀಭತ್ಸ ದೃಶ್ಯಗಳೇ ಕಾಣಸಿಗುತ್ತದೆ. ಸಂತ್ರಸ್ತರು, ರಕ್ಷಣಾ ಸಿಬ್ಬಂದಿ ಭೂಕುಸಿತದ ಭೀಕರತೆಯನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ. ಕೆಸರಿನಲ್ಲಿ ಸಿಲುಕಿಕೊಂಡವರು, ಜನರ ಅಳು, ಸಹಾಯಕ್ಕಾಗಿ ಕೈ ಚಾಚುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿದೆ. ಅವರ ಪ್ರೀತಿಪಾತ್ರರ ಜೀವಗಳು ಅವರ ಕಣ್ಣ ಮುಂದೆಯೇ ಕೊಚ್ಚಿ ಹೋಗಿವೆ. ಪ್ರವಾಹದ ತೀವ್ರತೆಗೆ ಹಲವರು ಕೊಚ್ಚಿಹೋದರು. ಅವರ ಮೃತದೇಹಗಳು, ದೇಹದ ಭಾಗಗಳು ಈಗ ಸಿಗುತ್ತಿವೆ.
ಮೃತರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದುಕೊಂಡವರ ಹೆಸರು ಕೂಗುತ್ತಾ, ಅಳುತ್ತಾ ಹುಡುಕಾಟ ನಡೆಸುತ್ತಿದ್ದಾರೆ.