ಸುಳ್ಯ:ಸುಳ್ಯ ನಗರಕ್ಕೆ ನೀರು ಸರಬರಾಜು ಆಗುತ್ತಿರುವ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ನಿಂತು ಹೋಗಿರುವ ಹಿನ್ನನಲೆಯಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ತೊಂದರೆಯಾಗುತ್ತಿದೆ. ಆದುದರಿಂದ ಸರಬರಾಜು ಆಗುತ್ತಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು. ಇತರೆ ಕೃಷಿ ಚಟುವಟಿಕೆಗಳಿಗೆ ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಬಾರದು
ಎಂದು ನಗರ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ನೀರನ್ನು ಕುಡಿಯಲು ಹೊರತು ಪಡಿಸಿ ಇತರ ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ನೀರಿನ ಸಂಪರ್ಕವನ್ನು ಕಡಿತ ಮಾಡಲಾಗುವುದು ಎಂದು ತಿಳಿಸಲಾಗಿದೆ. ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಇಲ್ಲದಿರುವುದರಿಂದ ನಗರದಲ್ಲಿ ನೀರು ಸರಬರಾಜು ಅವಧಿಯಲ್ಲಿ ಕೂಡ ಕಡಿತಗೊಳಿಸಲಾಗುವುದು ಸಾರ್ವಜನಿಕರು ಸಹಕರಿಸಲು ನಗರ ಪಂಚಾಯತ್ ವಿನಂತಿಸಿದೆ.
ತುರ್ತು ಸಭೆ ಕರೆಯಲು ಡಿಸಿಗೆ ಮನವಿ:
ಸುಳ್ಯ ನಗರದ ಕುಡಿಯುವ ನೀರಿನ ಕೊರತೆ ಹಿನ್ನಲೆಯಲ್ಲಿ ತುರ್ತು ಸಭೆ ಕರೆಯಲು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.ಈಗಿನ ಪರಿಸ್ಥಿತಿಯಲ್ಲಿ 3-4 ದಿನಗಳಿಗೆ ಮಾತ್ರ ನಗರಕ್ಕೆ ನೀರು ಸರಬರಾಜು ಸಾಧ್ಯವಿರುವಂತೆ ಕಂಡುಬರುತ್ತಿದೆ.
ಈ ಹಿನ್ನಲೆಯಲ್ಲಿ ನಗರಕ್ಕೆ ನೀರು ಸರಬರಾಜು ಕುರಿತಂತೆ ಅನೇಕ ತುರ್ತು ಕ್ರಮಗಳನ್ನು ಕೈಗೊಳ್ಳುವುದು ತೀರಾ ಅಗತ್ಯವಿರುತ್ತದೆ. ಆದರೆ ಚುನಾವಣೆಯ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಪ್ರತಿನಿಧಿಗಳ ಸಭೆ ನಡೆಸಿ ಪಂಚಾಯತ್ ಪರಿಹಾರೋಪಾಯಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದು ನಮಗೆ ಅಸಾಧ್ಯವಾಗಿರುತ್ತದೆ.ಆದುದರಿಂದ ತಾವು ಈ ಕುರಿತು ತುರ್ತು ಗಮನಹರಿಸಿ ಕುಡಿಯುವ ನೀರಿನ ಸರಬರಾಜಿನ ಕುರಿತಂತೆ ಸುಳ್ಯದಲ್ಲಿ ತುರ್ತಾಗಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕರೆದು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ತುರ್ತು ಕ್ರಮಕ್ಕೆ ತಹಶೀಲ್ದಾರ್ ಅವರಿಗೆ ಮನವಿ:
ಸುಳ್ಯ ನಗರದ ಕುಡಿಯುವ ನೀರು ಮೂಲಧಾರವಾಗಿರುವ ಪಯಸ್ವಿನಿ ನದಿಯ ಹರಿವು ಸಂಪೂರ್ಣ ನಿಂತುಹೋಗಿದ್ದು, ನಗರಕ್ಕೆ ಈಗಿರುವ ಹಂತದಲ್ಲಿ ಗರಿಷ್ಠ 3-4 ದಿನಗಳಿಗೆ ಮಾತ್ರ ನೀರು ಪೂರೈಕೆಯು ಸಾಧ್ಯವಿರುವಂತೆ ಕಂಡುಬರುತ್ತಿದೆ.ಈ ಹಿನ್ನಲೆಯಲ್ಲಿ ಪಯಸ್ವಿನಿ ನದಿಯ ನೀರಿನಹರಿವು ಹೆಚ್ಚು ಮಾಡುವ ನಿಟ್ಟಿನಲ್ಲಿ ಸುಳ್ಯದಿಂದ ಸಂಪಾಜೆವರೆಗಿನ ಪಯಸ್ವಿನಿ ನದಿಗೆ ಅಳವಡಿಸಿರುವ ಕೃಷಿ ಪಂಪ ಸೆಟ್ಗಳಿಗೆ ವಿದ್ಯುತ್ ಕಡಿತಗೊಳಿಸುವುದು, ಜಾಕ್ ವೆಲ್ ಬಳಿಯಲ್ಲಿ ನದಿ ಹೂಳೆತ್ತುವುದು, ನೀರಿನ ಮಿತ ಬಳಕೆಯ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಇತ್ಯಾದಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.ಪ್ರಸ್ತುತ ಚುನಾವಣಾ ಸಮಯದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಸಭೆ ಕರೆದು ತುರ್ತು ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲದೇ ಇರುವ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ತುರ್ತು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ.