ಸುಳ್ಯ:ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಮಕ್ಕಳಿಗಾಗಿ ನಡೆದ ವಾಲಿಬಾಲ್ ತರಬೇತಿ ಶಿಬಿರ ಸಮಾಪನಗೊಂಡಿತು. ಯುವಜನ ಸಂಯುಕ್ತ ಮಂಡಳಿ ಬಳಿಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ವರ್ಷದ 11 ದಿನಗಳ ಶಿಬಿರದಲ್ಲಿ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ
ರಾಜ್ಯ ವಾಲಿಬಾಲ್ ಅಸೋಸಿಯೇಷನ್ನ ಅಸೋಸಿಯೇಟ್ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ ಮಾತನಾಡಿ’ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಮತ್ತು ಕ್ರೀಡೆಯು ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಹೇಳಿದರು. ವಾಲಿಬಾಲ್ ಕ್ರೀಡಾ ಕ್ಷೇತ್ರದಲ್ಲಿ ಹೊಸ ತಲೆಮಾರನ್ನು ಬೆಳೆಸಲು ಈ ರೀತಿಯ ಶಿಬಿರವನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ನ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಮಾತನಾಡಿ’ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಉಳಿಕೆ ಹಣದಿಂದ ಎರಡು ವರ್ಷಗಳಿಂದ ವಾಲಿಬಾಲ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.
ವಾಲಿಬಾಲ್ ತರಬೇತುದಾರರಾದ ಮನೋಜ್ ಕುಮಾರ್ ಅಡ್ಕಾರ್ ಹಾಗೂ ರಾಜೀವಿ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವಾಲಿಬಾಲ್ ಅಸೋಸಿಯೇಷನ್ನ ಪದಾಧಿಕಾರಿಗಳಾದ ಇರ್ಫಾನ್ ಜನತಾ, ಕೆ.ಗೋಕುಲ್ದಾಸ್, ರಜ್ಜು ಭಯ್ಯಾ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು. ವಾಲಿಬಾಲ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ವಂದಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.