ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ಗೆ ಪ್ರವೇಶಿಸಿದೆ. ಅಲ್ಲದೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ
ವಿರಾಟ್ ಕೊಹ್ಲಿ 700 ರನ್ಗಳ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ನಲ್ಲಿ ಎರಡನೇ ಬಾರಿ 700ಕ್ಕೂ ಹೆಚ್ಚು ರನ್ ಗಳಿಸಿರುವ ವಿರಾಟ್, ಮಾಜಿ ಆಟಗಾರ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 2016ರ ಆವೃತ್ತಿಯಲ್ಲಿ ಕೊಹ್ಲಿ ದಾಖಲೆಯ 973 ರನ್ ಗಳಿಸಿದ್ದರು. ಮತ್ತೊಂದೆಡೆ ಗೇಲ್ 2012ರಲ್ಲಿ 733 ಹಾಗೂ 2013ರಲ್ಲಿ 708 ರನ್ ಗಳಿಸಿದ್ದರು.
2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೂ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಚೆನ್ನೈ ವಿರುದ್ದ ನಾಲ್ಕು ಸಿಕ್ಸರ್ ಗಳಿಸಿರುವ ವಿರಾಟ್ ಈವರೆಗೆ 37 ಸಿಕ್ಸರ್ಗಳನ್ನು ಗಳಿಸಿದ್ದಾರೆ. ನಿಕೋಲಸ್ ಪೂರನ್ (36) ಹಾಗೂ ಅಭಿಷೇಕ್ ಶರ್ಮಾ (35) ನಂತರದ ಸ್ಥಾನದಲ್ಲಿದ್ದಾರೆ.ಐಪಿಎಲ್ ಟೂರ್ನಿಯಲ್ಲಿ 150ಕ್ಕೂ ಹೆಚ್ಚು ಸಿಕ್ಸರ್ ಗಳಿಸಿದ ಮೊದಲ ತಂಡವೆಂಬ ಖ್ಯಾತಿಗೆ ಆರ್ಸಿಬಿ ಪಾತ್ರವಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಬ್ಯಾಟರ್ಗಳು ಈವರೆಗೆ 157 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3,000 ರನ್ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್ ತಾಣವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾ 2,295 ರನ್ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಎಬಿ ಡಿವಿಲಿಯರ್ಸ್ 1,960 ರನ್ ಗಳಿಸಿದ್ದಾರೆ. ಹಾಗೆಯೇ ಟ್ವೆಂಟಿ-20 ಕ್ರಿಕೆಟ್ನಲ್ಲಿ ಭಾರತ ನೆಲದಲ್ಲಿ 9,000ಕ್ಕೂ ಅಧಿಕ ರನ್ ಗಳಿಸಿದ ಹಿರಿಮೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
Lಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ವಿರಾಟ್ ಕೊಹ್ಲಿ (47), ನಾಯಕ ಫಫ್ ಡುಪ್ಲೆಸಿ (54), ರಜತ್ ಪಾಟೀದಾರ್ (41) ಹಾಗೂ ಕ್ಯಾಮರಾನ್ ಗ್ರೀನ್ (38) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ಏಳು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ರಚಿನ್ ರವೀಂದ್ರ (61), ರವೀಂದ್ರ ಜಡೇಜ (42) ಹಾಗೂ ಮಹೇಂದ್ರ ಸಿಂಗ್ ಧೋನಿ (25) ಹೋರಾಟವು ವ್ಯರ್ಥವೆನಿಸಿತು.
ಐಪಿಎಲ್ 17ನೇ ಆವೃತ್ತಿಯ ಮೊದಲ ಎಂಟು ಪಂದ್ಯಗಳಲ್ಲಿ ಆರ್ಸಿಬಿ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಬಳಿಕದ ಎಲ್ಲ ಆರು ಪಂದ್ಯಗಳನ್ನು ಗೆದ್ದು ಆರ್ಸಿಬಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಇನ್ನು 2011ರ ಆವೃತ್ತಿಯಲ್ಲಿ ಆರ್ಸಿಬಿ ಸತತ ಏಳು ಮತ್ತು 2009 ಹಾಗೂ 2016ರಲ್ಲಿ ಸತತ ಐದು ಪಂದ್ಯಗಳಲ್ಲಿ ಜಯ ಗಳಿಸಿತ್ತು.
ಐಪಿಎಲ್ ಇತಿಹಾಸದಲ್ಲಿ ಒಂಬತ್ತನೇ ಸಲ ಆರ್ಸಿಬಿ ಪ್ಲೇ-ಆಫ್ಗೆ ಪ್ರವೇಶಿಸಿದೆ. ಈ ಪೈಕಿ ಮೂರು ಬಾರಿ ರನ್ನರ್-ಅಪ್ ಆಗಿತ್ತು. ಮತ್ತೊಂದೆಡೆ ಚೆನ್ನೈ ಮೂರನೇ ಬಾರಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಎಡವಿದೆ.ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ 6ನೇ ಸಲ 200ಕ್ಕೂ ಅಧಿಕ ರನ್ಗಳ ಸಾಧನೆ ಮಾಡಿದೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಮತ್ತು ಪ್ರಸಕ್ತ ಸಾಲಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸಹ ಇದೇ ಸಾಧನೆ ಮಾಡಿದೆ.