ನವದೆಹಲಿ: ಪ್ಯಾರಿಸ್ನಿಂದ ಭಾರತಕ್ಕೆ ಮರಳಿದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದ ನೂರಾರು ಅಭಿಮಾನಿಗಳು ಹೂಮಳೆಗೆರೆದು ನೋಟು ಹಾಗೂ ಹೂವಿನ ಹಾರ ಹಾಕಿ, ಬೆಂಬಲದ ಘೋಷಣೆಗಳನ್ನು ಕೂಗಿದರು.ಈ ವೇಳೆ
ಭಾವುಕರಾದ ಫೋಗಟ್ ಕಣ್ಣೀರು ಸುರಿಸಿದರು.ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್ನಿಂದ ಅನರ್ಹಗೊಂಡು ಆಘಾತ ಅನುಭವಿಸಿದ್ದ ಫೋಗಟ್ ಅವರನ್ನು, ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಸಾಕಷ್ಟು ಮಂದಿ ಆದರದಿಂದ ಬರಮಾಡಿಕೊಂಡರು.ತೆರೆದ ಜೀಪ್ನಲ್ಲಿ ನಿಂತು ಎಲ್ಲರಿಗೂ ಕೈಮುಗಿದ ವಿನೇಶ್, ‘ಇಡೀ ದೇಶಕ್ಕೆ ಧನ್ಯವಾದ ಹೇಳುತ್ತೇನೆ’ ಎಂದರು.
ನಿಗದಿಗಿಂತ 100 ಗ್ರಾಂ ಅಧಿಕ ಹೊಂದಿದ್ದಾರೆ ಎಂದು ಫೋಗಟ್ ಅವರನ್ನು ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು.ದೆಹಲಿಯ ದ್ವಾರಕ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಫೋಗಟ್, ತಮ್ಮ ಊರು ಹರಿಯಾಣದ ಬಲಾಲಿಗೆ ಪ್ರಯಾಣ ಬೆಳೆಸಿದರು. ಮಾರ್ಗಮಧ್ಯೆ, ಅಲ್ಲಲ್ಲಿ ವಾಹನ ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಕೋರಿದರು.
ಫೈನಲ್ ಹಣಾಹಣಿಯಿಂದ ತಮ್ಮನ್ನು ಹೊರಗಿಟ್ಟದ್ದನ್ನು ಪ್ರಶ್ನಿಸಿ ಹಾಗೂ ತಮಗೂ ಜಂಟಿ ಬೆಳ್ಳಿ ಪದಕ ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಗೆ (ಸಿಎಎಸ್) ವಿನೇಶ್ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ, ಪ್ಯಾರಿಸ್ನಲ್ಲೇ ಉಳಿದಿದ್ದರು. ಅವರ ಮನವಿ ಬುಧವಾರ ತಿರಸ್ಕೃತಗೊಂಡಿತ್ತು.