ಸುಳ್ಯ:ಶ್ರೀಮಂತಿಕೆ ಮತ್ತು ಅಧಿಕಾರದ ದುರಾಸೆಯೇ ಭ್ರಷ್ಟಾಚಾರಕ್ಕೆ ಮೂಲ. ಪ್ರತಿಯೊಬ್ಬರು ಇರುವುದರಲ್ಲಿ ತೃಪ್ತಿ ಹೊಂದುವ ಗುಣ ಅಳವಡಿಸಿಕೊಂಡರೆ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಇನ್ನೊಬ್ಬರ ಜೇಬಿಗೆ ಕೈಹಾಕದೇ, ಹಣಕ್ಕೆ ಆಸೆ ಪಡದೆ ಬದುಕಿದರೆ ಶ್ರೀಮಂತಿಕೆ ಇಲ್ಲದೆಯೂ

ಸಂತೋಷದಿಂದ ಬದುಕಲು ಸಾಧ್ಯವಿದೆ. ಇಂದಿನ ಯುವ ಜನಾಂಗ ಭೃಷ್ಟಾಚಾರರಹಿತ ಬದುಕು ನಡೆಸುವ ಸಂಕಲ್ಪ ಮಾಡಬೇಕು. ಇದ್ದುದರಲ್ಲಿ ತೃಪ್ತಿ ಹೊಂದುವ ಗುಣ ಅಳವಡಿಸಿಕೊಳ್ಳಬೇಕು. ಸಮಾಜದ ಭಾವನೆಗಳನ್ನು ಬದಲಾಯಿಸುವ ಕೆಲಸ ಮಾಡಬೇಕು. ಆಗ ಭೃಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದವರು ಹೇಳಿದರು. ಭ್ರಚ್ಟಾಚಾರ ಈ ರೀತಿ ಮುಂದುವರಿದರೆ ಜನರಲ್ಲಿ ನಿರಾಶೆ, ಅಕ್ರೋಶ ಮೂಡಿ ಮುಂದೊಂದು ದಿನ ದೊಡ್ಡ ಕ್ರಾಂತಿಗೆ ಕಾರಣವಾಗಬಹುದು ಎಂದ ಅವರು ಮಕ್ಕಳನ್ನು ಪ್ರಾಮಾಣಿಕ ಮತ್ತು ಸತ್ಪ್ರಜೆಗಳಾಗಿ ಬೆಳೆಸಲು ಪ್ರತಿಯೊಬ್ಬ ಫೋಷಕರು ಪ್ರಯತ್ನ ನಡೆಸಬೇಕು. ಪ್ರಾಮಾಣಿಕ ಹಾಗೂ ಭ್ರಷ್ಟಾಚಾರ ರಹಿತ ಜನಾಂಗದಿಂದ ಮಾತ್ರ ದೇಶದ ಉಳಿವು ಸಾಧ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಮಾತನಾಡಿ ಸಮಾಜದಲ್ಲಿ ಭ್ರಷ್ಟಾಚಾರ, ಅನ್ಯಾಯ ಆದಾಗ ಸಿಟ್ಟು ಬಾರದೇ ಇದ್ದರೆ ಅದು ದೊಡ್ಡ ದುರಂತ ಎಂದು ಹೇಳಿದರು. ಸ್ಕೋಪ್ ಇರುವುದು ಯಾವುದೇ ಕೋರ್ಸ್ಗಳಿಗೆ ಅಲ್ಲಾ, ಸ್ಕೋಪ್ ಇರುವುದು ವ್ಯಕ್ತಿಗಳಿಗೆ, ಉತ್ತಮ ವ್ಯಕ್ತಿತ್ವ, ಪರಿಸ್ಥಿತಿಯನ್ನು ನಿಭಾಯಿಸುವ ಚಾಕಚಕ್ಯತೆ ಇದ್ದರೆ ಪ್ರತಿ ವ್ಯಕ್ತಿಯೂ ಶೋಭಿಸಲು ಸಾಧ್ಯ ಎಂದರು. ಹಿಂದೆಲ್ಲಾ ಜಗತ್ತು 30 ವರ್ಷಗಳಿಗೆ

ಬದಲಾಗುತ್ತಿತ್ತು. ಆದರೆ ಈಗ ಕೇವಲ 5 ವರ್ಷಗಳಲ್ಲಿ ಜಗತ್ತು ಅಗಾಧವಾಗಿ ಬದಲಾಗುತ್ತದೆ. ಈ ಬದಲಾವಣೆಯನ್ನು ಸ್ವೀಕರಿಸುವ ಗುಣ ಇದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಇದೆ ಎಂದು ಅವರು ಹೇಳಿದರು.
ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಮಾತನಾಡಿ ದುರಾಸೆಯಿಲ್ಲದೆ ಬದುಕಿದರೆ ಬದುಕಿನಲ್ಲಿ ಸಂತೃಪ್ತಿ ಸಿಗುತ್ತದೆ ಎಂದರು. ನಮ್ಮ ಆಡಳಿತಕ್ಕೆ, ರಾಜಕಾರಣಿಗಳಿಗೆ ರಾಜನೀತಿ ಬೇಕು ಎಂದು ಅವರು ಹೇಳಿದರು. ಸುಳ್ಯ ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಯಾಗಿದ್ದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಡ್ಡಡ್ಕ ವಂದಿಸಿದರು.
ಸೆಪ್ಟೆಂಬರ್ 28 ರಂದು ಶುಭಾರಂಭಗೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ನವೆಂಬರ್ 8 ರಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಪ್ರವೇಶಾತಿಯನ್ನು ಪಡೆದುಕೊಂಡಿರುವ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳಿಗಾಗಿ ತರಬೇತಿಯನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆ ಗಳ ವಿದ್ಯಾರ್ಥಿಗಳೊಂದಿಗೆ ಸಂತೋಷ್ ಹೆಗ್ಡೆಯವರು ಸಂವಾದ ನಡೆಸಿದರು.









