ವಯನಾಡ್/ರಾಂಚಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ.ಮತಗಟ್ಟೆಗಳಲ್ಲಿ ಜನ ಸಾಲುಗಟ್ಟಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. 1,354 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 14 ಲಕ್ಷಕ್ಕೂ ಅಧಿಕ ಮಂದಿ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ.ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ
ಈ ಕ್ಷೇತ್ರ ತೆರವಾಗಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ರಾಯ್ಬರೇಲಿಯನ್ನು ಉಳಿಸಿಕೊಂಡಿದ್ದರು.ಈ ಉಪಚುನಾವಣೆಯಲ್ಲಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ, ಎಲ್ಡಿಎಫ್ನಿಂದ ಸತ್ಯನ್ ಮೊಕೇರಿ ಕಣದಲ್ಲಿದ್ದಾರೆ. ಎನ್ಡಿಎ ಮೈತ್ರಿಕೂಟದಿಂದ ನವ್ಯಾ ಹರಿದಾಸ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತ್ರಿಶೂರು ಜಿಲ್ಲೆಯ ಚೇಲಕ್ಕರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಜನ ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಧಾವಿಸುತ್ತಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಒಟ್ಟು 81 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಉಳಿದ 38 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ ಸೇರಿ 683 ಅಭ್ಯರ್ಥಿಗಳು ಕಣದಲ್ಲಿದ್ದಾರೆ.15 ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5ಕ್ಕೆ ಮುಕ್ತಾಯವಾಗಲಿದೆ.
950 ಬೂತ್ಗಳಲ್ಲಿ ಮತದಾನವು ಸಂಜೆ 4 ಗಂಟೆಗೆ ಕೊನೆಗೊಳ್ಳಲಿದೆ, ಆದರೂ ಆ ಸಮಯದಲ್ಲಿ ಸರದಿಯಲ್ಲಿ ನಿಂತಿರುವ ಜನರು ತಮ್ಮ ಹಕ್ಕು ಚಲಾಯಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 1.37 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ.ಜಾರ್ಖಂಡ್ನಲ್ಲಿ ಜೆಎಂಎಂ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ಮರಳಿ ಅಧಿಕಾರಕ್ಕೆ ಬರುವ ಯತ್ನದಲ್ಲಿದ್ದರೆ, ಬಿಜೆಪಿಯು ‘ಇಂಡಿಯಾ’ಕ್ಕೆ ತೀವ್ರ ಸ್ಪರ್ಧೆ ಒಡ್ಡಿದೆ.