ಕಾಸರಗೋಡು:ಮಂಗಳವಾರ ರಾತ್ರಿ ಕಾಸರಗೋಡಿಗೆ ಆಗಮಿಸಿದ ಕೇರಳದ ಮೊದಲ ‘ವಂದೇ ಭಾರತ್ ಎಕ್ಸ್ಪ್ರೆಸ್‘ ರೈಲಿಗೆ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ತಿರುವನಂತಪುರಂನಿಂದ ಹೊರಟು ರಾತ್ರಿ 9 ಗಂಟೆ ಸುಮಾರಿಗೆ ಕಾಸರಗೋಡು ತಲುಪಿದ ರೈಲಿಗೆ ಜನಪ್ರತಿನಿಧಿಗಳು, ಪ್ರಮುಖರು ಸಾರ್ವಜನಿಕರು ಸೇರಿ ಸ್ವಾಗತ ನೀಡಿದರು.ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ
ತಿರುವಂತನಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ರೈಲು ತಿರುವನಂತಪುರ ಮತ್ತು ಕಾಸರಗೋಡು ನಡುವೆ ಚಲಿಸಲಿದೆ.ಕೇರಳಕ್ಕೆ ಎರಡು ದಿನಗಳ ಭೇಟಿ ನೀಡಿದ ಪ್ರಧಾನಿ, ಕೇಂದ್ರದ ವಿವಿಧ ಯೋಜನೆಗಳಿಗೆ ರಾಜ್ಯದಲ್ಲಿ ಚಾಲನೆ ನೀಡಿದರು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಳಿದ ಮೋದಿ ಸೆಂಟ್ರಲ್ ರೈಲು ನಿಲ್ದಾಣದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ನೂರಾರು ಜನರು ಪ್ರಧಾನಿ ಮೋದಿಗೆ ಸ್ವಾಗತ ನೀಡಿದರು.
ಇದೀಗ ಚಾಲನೆಗೊಂಡ ವಂದೇ ಭಾರತ್ ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಹೀಗೆ 11 ಜಿಲ್ಲೆಗಳ ನಡುವೆ ಚಲಿಸಲಿದೆ.
ಆರಂಭದಲ್ಲಿ ವಂದೇ ಭಾರತ್ ರೈಲನ್ನು ತಿರುವನಂತಪುರಂ ಮತ್ತು ಕಣ್ಣೂರು ನಡುವೆ ಓಡಿಸಲು ಯೋಜಿಸಲಾಗಿತ್ತು. ರೈಲು ಸೇವೆಯನ್ನು ಕಾಸರಗೋಡಿನವರೆಗೂ ವಿಸ್ತರಿಸಿ ಎಂದು ಕೇಂದ್ರ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಮನವಿ ಮಾಡಿದ್ದು,ಅವರ ಮನವಿಯ ಮೇರೆಗೆ ಈ ಮಾರ್ಗವನ್ನು ಕಾಸರಗೋಡಿನವರೆಗೂ ವಿಸ್ತರಿಸಲಾಗಿತ್ತು.