ಸುಳ್ಯ:ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಯಂತ್ರ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ನಾಯಕರ ಒತ್ತಡದಿಂದ ರದ್ದುಗೊಳಿಸಿರುವುದು ಖಂಡನೀಯ ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.ಆರೋಗ್ಯ ಜನಸಾಮಾನ್ಯರ ಅಗತ್ಯತೆಯಲ್ಲೊಂದು ಈ ಹಿನ್ನೆಲೆಯಲ್ಲಿ
ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಯಂತ್ರ ಉದ್ಘಾಟನೆಯಾಗಬೇಕಿತ್ತು. ಆದರೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಕಾಂಗ್ರೆಸ್ನ ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಸೂಡ ಅಧ್ಯಕ್ಷರನ್ನು ಆಮಂತ್ರಣ ಪತ್ರದಲ್ಲಿ ಹೆಸರಿಸಿಲ್ಲ ಎಂಬ ಕಾರಣಕ್ಕೆ ಡಿಹೆಚ್ಓಗೆ, ಸಚಿವರಿಗೆ ದೂರು ನೀಡಿ ಇದೀಗ ಕಾರ್ಯಕ್ರಮ ರದ್ದುಗೊಂಡಿದೆ. ಇಂತಹ ಆರೋಗ್ಯ ಸಂಬಂಧಿತ ಉದ್ಘಾಟನಾ ವಿಚಾರಗಳಲ್ಲಿ ಚಿಲ್ಲರೆ ರಾಜಕೀಯ ತಂದಿರುವುದನ್ನು ಬಿಜೆಪಿ ಖಂಡಿಸುತ್ತದೆ. ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿ ಕಾರ್ಯಕ್ರಮವನ್ನು ರದ್ದುಪಡಿಸಿರುವುದು ಸರಿಯಲ್ಲ ,ರಾಜಕೀಯ ಮಾಡಿ, ಆದರೆ ಆರೋಗ್ಯ, ಅಭಿವೃದ್ಧಿ ಸಂಬಂಧಿತ ವಿಚಾರದಲ್ಲಿ ಚಿಲ್ಲರೆ ರಾಜಕೀಯ ಮಾಡಬೇಡಿ ಈ ರೀತಿಯ ನಡವಳಿಕೆ ಖಂಡನೀಯ ಎಂದು ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.