ವಾಷಿಂಗ್ಟನ್: ಇರಾನ್ ಅನ್ನು ಭೂಪಟದಿಂದ ಅಳಿಸಿಹಾಕುವುದಾಗಿ ನೀಡಿದ್ದ ಗಡುವು ಮುಗಿಯುವ ಮುನ್ನ ಎರಡು ವಾರಗಳ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರೂಥ್ ಸೋಷಿಯಲ್’ನಲ್ಲಿ ಕದನ ವಿರಾಮ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಕದನ ವಿರಾಮಕ್ಕೆ
ಇರಾನ್ ಕೂಡ ಸಮ್ಮತಿ ಸೂಚಿಸಿದ್ದು ಹೊರ್ಮುಜ್ ಜಲಸಂಧಿ ತೆರೆಯಲು ಸಮ್ಮತಿಸಿದೆ ಎಂದು ವರದಿಯಾಗಿದೆ.
‘ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಯ ಹಾಗೂ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ಒಪ್ಪುವ ಷರತ್ತಿನ ಆಧಾರದ ಮೇಲೆ ಇಂದು ರಾತ್ರಿ ಇರಾನ್ ಮೇಲೆ ದಾಳಿಯನ್ನು ನಿಲ್ಲಿಸಲು ನಿರ್ಧರಿಸಲಸಲಾಗಿದೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕೂಡ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲದೆ ಇಸ್ಲಾಮಾಬಾದ್ನಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.ಪಾಕಿಸ್ತಾನದ ಪ್ರಧಾನಿ ಷರೀಫ್ ಅವರು ಏಪ್ರಿಲ್ 10ರ ಶುಕ್ರವಾರದಂದು ಇಸ್ಲಾಮಾಬಾದ್ಗೆ ಆಗಮಿಸಿ, ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸುವ ಅಂತಿಮ ಒಪ್ಪಂದದ ಕುರಿತು ಮಾತುಕತೆ ನಡೆಸುವಂತೆ ಅಮೆರಿಕ ಮತ್ತು ಇರಾನ್ ನಿಯೋಗಗಳಿಗೆ ಆಹ್ವಾನ ನೀಡಿದ್ದಾರೆ.
ಇರಾನ್ನಿಂದ 10 ಅಂಶಗಳ ಪ್ರಸ್ತಾಪವನ್ನು ಸ್ವೀಕರಿಸಲಾಗಿದ್ದು, ಅದು ಮಾತುಕತೆಗೆ ಸೂಕ್ತವಾದ ಆಧಾರವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಎರಡು ವಾರಗಳ ಅವಧಿಯನ್ನು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ದೊಡ್ಡ ಒಪ್ಪಂದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇರಾನ್ ಮೇಲಿನ ದಾಳಿಗಳು ನಿಂತರೆ, ನಮ್ಮ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ. ಮುಂದಿನ ಎರಡು ವಾರಗಳವರೆಗೆ ಇರಾನ್ ಸೇನಾ ಸಮನ್ವಯದೊಂದಿಗೆ ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರ ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.










