ಸುಳ್ಯ:ಕೇರಳ-ಕರ್ನಾಟಕ ಗಡಿಪ್ರದೇಶ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿರುವ ಶ್ರೀ ಉಣಿಚೂರು ಭಗವತಿ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಕಾಯ್ದಿರಿಸಬೇಕು ಎಂದು ದೇವಸ್ಥಾನದ ಆಡಳಿತ ಟ್ರಸ್ಟ್ನ ಪದಾಧಿಕಾರಿಗಳು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಲವು ಶತಮಾನಗಳ ಇತಿಹಾಸವಿರುವ ಈ ದೇಗುಲಕ್ಕೆ
ಸುತ್ತಮುತ್ತಲಿನ ಪ್ರದೇಶಗಳ ಜನರು ಹಾಗೂ ನೆರೆಯ ಕೇರಳ ರಾಜ್ಯದ ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದು ಪೂಜೆಯಲ್ಲಿ ಭಾಗವಹಿಸುತ್ತಾರೆ. ದೇವಾಲಯವು ಈಗ ಶಿಥಿಲಾವಸ್ಥೆಯಲ್ಲಿದೆ. ದೇವಾಲಯದ ನವೀಕರಣಕ್ಕೆ ಮತ್ತು ಹಿಂದಿನ ವರ್ಷಗಳಲ್ಲಿ ಹೊಂದಿದ್ದ ಹಳೆಯ ವೈಭವದ ಪುನಃಸ್ಥಾಪನೆಗೆ ಅಗತ್ಯವಾದ ಕ್ರಮಗಳು ಮತ್ತು ಕಾರ್ಯಗಳನ್ನು ಕೈಗೊಳ್ಳಲು ಟ್ರಸ್ಟ್ ನಿರ್ಧರಿಸಿದೆ.
ಆದುದರಿಂದ ದೇವಾಲಯದ ಹೆಸರಿನಲ್ಲಿ ಭೂಮಿಯನ್ನು ಕಾಯ್ದಿರಿಸಲು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಸಲಾಗಿದೆ.
ಟ್ರಸ್ಟ್ನ ಚೆಯರ್ಮೆನ್ ಹಾಗೂ ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಕಾರ್ಯದರ್ಶಿ ಮಧು ಕರಿಚ್ಚೇರಿ, ಟ್ರಸ್ಟ್ ಸದಸ್ಯರಾದ ಪವಿತ್ರನ್ ಗುಂಡ್ಯ, ಸತ್ಯಕುಮಾರ್ ಆಡಿಂಜ, ಶೈಜೇಶ್ ಕರಿಚ್ಚೇರಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಎಸ್.ಪೊನ್ನಣ್ಣ ಅವರಿಗೆ ಈ ಬೇಡಿಕೆಯನ್ನಿರಿಸಿ ಮನವಿ ಸಲ್ಲಿಸಲಾಗುವುದು ಎಂದು ಟ್ರಸ್ಟ್ ಚೆಯರ್ಮೆನ್ ಎನ್.ಬಾಲಚಂದ್ರನ್ ನಾಯರ್ ತಿಳಿಸಿದ್ದಾರೆ.












