ಸುಳ್ಯ:ಸುಳ್ಯದಲ್ಲಿ ನಿರಂತರ ಉಂಟಾಗುತ್ತಿರುವ ವಿದ್ಯುತ್ ಕಡಿತ ಸಮಸ್ಯೆಯ ಪರಿಹಾರಕ್ಕೆ ಬೆಳ್ಳಾರೆಯಿಂದ ಸುಳ್ಯಕ್ಕೆ ಪರ್ಯಾಯ 33 ಕೆವಿ ವಿದ್ಯುತ್ ಲೈನ್ ನಿರ್ಮಾಣಕ್ಕೆ ಮೆಸ್ಕಾಂ ಯೋಜನೆ ರೂಪಿಸಿದೆ.ಅಂಡರ್ ಗ್ರೌಂಡ್ ಕೇಬಲ್(ಭೂಗರ್ಭ ಕೇಬಲ್) ಮೂಲಕ ನಿರ್ಮಾಣ ಮಾಡುವ ಲೈನ್ಗೆ ತಾಂತ್ರಿಕ ಅನುಮೋದನೆ ಸಿಕ್ಕಿದೆ ಎಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ತಿಳಿಸಿದ್ದಾರೆ. ಸುಳ್ಯ ಮೆಸ್ಕಾಂ ಕಚೇರಿಯಲ್ಲಿ
ಮಾಹಿತಿ ನೀಡಿದ ಅವರು ಒಟ್ಟು 21 ಕಿ.ಮಿ. ಲೈನ್ನಲ್ಲಿ 16 ಕಿ.ಮಿ. ಅಂಡರ್ಗ್ರೌಂಡ್ ಕೇಬಲ್(ಭೂಗರ್ಭ ಕೇಬಲ್) ಹಾಗೂ 5 ಕಿಲೋಮೀಟರ್ ಓವರ್ ಹೆಡ್ ಲೈನ್ ನಿರ್ಮಾಣ ಆಗಲಿದೆ. ಸುಳ್ಯದಿಂದ ಸೋಣಂಗೇರಿ ತನಕ ಲೈನ್ ಮೂಲಕ ಮತ್ತು ಬೆಳ್ಳಾರೆಯಲ್ಲಿ ಕೆಲವು ಭಾಗ ಲೈನ್ ನಿರ್ಮಾಣ ಮಾಡಲಾಗುವುದು. ಉಳಿದ ಭಾಗದಲ್ಲಿ ಅಂಡರ್ಗ್ರೌಂಡ್ ಕೇಬಲ್ ಲೈನ್ ನಿರ್ಮಾಣ ಆಗಲಿದೆ. 12 ಕೋಟಿ ರೂ ವೆಚ್ಚದಲ್ಲಿ ಈ ಹೊಸ ಲೈನ್ ನಿರ್ಮಾಣ ಆಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಮುಂದಿನ ಮಳೆಗಾಲಕ್ಕೆ ಮುನ್ನ ಲೈನ್ ನಿರ್ಮಾಣ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಪರ್ಯಾಯ ಲೈನ್ ಇಲ್ಲದ ಕಾರಣ ಈಗ ಇರುವ 33 ಕೆವಿ ಲೈನ್ನಲ್ಲಿ ಸಮಸ್ಯೆ ಬಂದರೆ ಸುಳ್ಯಕ್ಕೆ ನಿರಂತರ ವಿದ್ಯುತ್ ಕಡಿತ ಆಗುತಿದೆ. ಪರ್ಯಾಯ ಲೈನ್ ಆದರೆ ವಿದ್ಯುತ್ ಕಡಿತಕ್ಕೆ ಪರಿಹಾರ ಆಗಬಹುದು ಎಂದು ಅವರು ತಿಳಿಸಿದ್ದಾರೆ. 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ನಡೆಯುತಿದೆ. 110 ಕೆವಿ ಸಬ್ ಸ್ಟೇಷನ್ ಪೂರ್ತಿಯಾದರೆ ಸಂಪಾಜೆ ಮತ್ತು ಜಾಲ್ಸೂರಿನಲ್ಲಿ ಹೊಸ 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.









