ಹರಾರೆ: ಅಂಡರ್-19 ವಿಶ್ವಕಪ್ನಲ್ಲಿ ಬುಧವಾರ ನಡೆದ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 311 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆಯುಷ್ ಮ್ಹಾತ್ರೆ ನೇತೃತ್ವದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಸೀಟ್ ಕಾಯ್ದಿರಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡವು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿತ್ತು. ಭಾರತ ತಂಡವು
41.1ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದ ಭಾರತ ಜಯದ ನಗು ಬೀರಿತು. ಬೃಹತ್ ಗುರಿ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ವೈಭವ್ ಸೂರ್ಯವಂಶಿ (68 ರನ್) ಸ್ಫೋಟಕ ಬ್ಯಾಟಿಂಗ್ ಮಾಡಿದರು. ಬಳಿಕ ಬಂದ ನಾಯಕ ಆಯುಷ್ ಮ್ಹಾತ್ರೆ (62 ರನ್) ಇನ್ನೋರ್ವ ಆರಂಭಿಕ ಬ್ಯಾಟರ್ ಆ್ಯರನ್ ಜಾರ್ಜ್ ಜೊತೆ ಅಮೋಘ ಇನಿಂಗ್ಸ್ ಆಡಿದರು. ಈ ಜೋಡಿ114 ರನ್ಗಳ ಜೊತೆಯಾಟ ಆಡಿ, ಭಾರತದ ಗೆಲುವನ್ನು ಖಚಿತಪಡಿಸಿತು.
ಶಿಸ್ತುಬದ್ಧ ಬ್ಯಾಟಿಂಗ್ ಪ್ರದರ್ಶಿಸಿದ ಆ್ಯರನ್ ಜಾರ್ಜ್ (115 ರನ್, 104ಎ, 4X15, 6X2) ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಡೀ ಟೂರ್ನಿಯಲ್ಲಿ ಅತ್ಯಂತ ಕ್ಲಾಸ್ ಮತ್ತು ಗುಣಮಟ್ಟದ ಆಟ ಪ್ರದರ್ಶಿಸಿದ ಜಾರ್ಜ್, ಆಕರ್ಷಕ ಶತಕ ಬಾರಿಸಿದರು. ಒತ್ತಡದ ಸಮಯದಲ್ಲಿ ಅದ್ಭುತ ನಿಯಂತ್ರಣದೊಂದಿಗೆ ಬ್ಯಾಟ್ ಬೀಸಿದ ಜಾರ್ಜ್, ಭಾರತದ ಗೆಲುವನ್ನು ಸುಲಭಗೊಳಿಸಿದರು.
ಇದಕ್ಕೂ ಮೊದಲು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ಉಸ್ಮಾನ್ ಸಾದತ್ (39) ಹಾಗೂ ಖಾಲಿದ್ ಅಹಮದ್ಝೈ (31) ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.ನಂತರ ಜೊತೆಯಾದ ಫೈಸಲ್ ಶಿನೋಜಾದ್ (110 ರನ್, 93 ಎ, 4X15) ಹಾಗೂ ಉಜೈರುಲ್ಲಾ ನಯಾಝೈ (101 ರನ್, 86ಎ, 4X12, 6X2) ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಈ ಇಬ್ಬರ ಅಮೋಘ ಜೊತೆಯಾಟದ ನೆರವಿನಿಂದ ಅಫ್ಗಾನಿಸ್ತಾನ ತಂಡ 300ರ ಗಡಿ ದಾಟಿತು.
ಭಾರತದ ಪರ ದೀಪೇಶ್ ದೇವೇಂದ್ರನ್ ಹಾಗೂ ಕನಿಷ್ಕ್ ಚೌಹಾನ್ ತಲಾ ಎರಡು ವಿಕೆಟ್ ಪಡೆದುಕೊಂಡರು.
2026ರ ಈ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತಂಡವು ಸೋಲಿಲ್ಲದ ಸರದಾರನಾಗಿ ಮುನ್ನುಗ್ಗಿದೆ. ಗುಂಪು ಹಂತದಲ್ಲಿ ಯುಎಸ್ಎ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಮಣಿಸಿದ್ದ ಭಾರತ, ಸೂಪರ್ ಸಿಕ್ಸ್ ಹಂತದಲ್ಲಿ ಜಿಂಬಾಬ್ವೆ ಮತ್ತು ಪಾಕಿಸ್ತಾನಕ್ಕೆ ಧೂಳೀಪಟ ಮಾಡಿತ್ತು. 2016ರ ನಂತರ ಭಾರತವು ಅಂಡರ್-19 ವಿಶ್ವಕಪ್ನಲ್ಲಿ ಸೆಮಿಫೈನಲ್ಗಿಂತ ಮೊದಲು ಎಂದೂ ಹೊರಬಿದ್ದಿಲ್ಲ. 2018 ಮತ್ತು 2022ರಲ್ಲಿ ಟ್ರೋಫಿ ಗೆದ್ದಿರುವ ಭಾರತ, ಈಗ ಮತ್ತೆ ಕಿರೀಟ ಮುಡಿಗೇರಿಸಿಕೊಳ್ಳಲು ಸನ್ನದ್ಧವಾಗಿದೆ.







