ದರ್ಬನ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ಯುವ 214 ರನ್ಗಳ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ಭಾರತ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ
ನ್ಯೂಜಿಲೆಂಡ್ ತಂಡವನ್ನು ಉದಯ್ ಸಹಾರನ್ ಪಡೆ ಬರೋಬ್ಬರಿ 214 ರನ್ಗಳಿಂದ ಮಣಿಸುವ ಮೂಲಕ ಸತತ ಮೂರು ಪಂದ್ಯಗಳಲ್ಲಿ 200 ಕ್ಕೂ ಅಧಿಕ ರನ್ಗಳಿಂದ ಗೆದ್ದ ದಾಖಲೆ ನಿರ್ಮಿಸಿದೆ. ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆ ಹಾಕಿತು. ತಂಡದ ಪರ ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ಮುಶೀರ್ ಖಾನ್ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರೆ ಆರಂಭಿಕ ಆಟಗಾರ ಆದರ್ಶ್ ಸಿಂಗ್ 52 ರನ್ಗಳ ಇನ್ನಿಂಗ್ಸ್ ಆಡಿದರು.
ಈ ಇಬ್ಬರ ಆಟದ ಸಲುವಾಗಿ ಭಾರತ 50 ಓವರ್ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 295 ರನ್ ಗಳಿಸಿತು. ಮುಶೀರ್ 126 ಎಸೆತಗಳಲ್ಲಿ 13 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ನೆರವಿನಿಂದ 131 ರನ್ ಗಳಿಸಿದರು. ಆ ಬಳಿಕ ಬೌಲಿಂಗ್ನಲ್ಲೂ ಮಿಂಚಿದ ಮುಶೀರ್, ಕಿವೀಸ್ ಪಾಳಯದ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಭಾರತ ನೀಡಿದ 296 ರನ್ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಈ ಗುರಿಯ ಸಮೀಪವೂ ಬರಲು ಸಾಧ್ಯವಾಗದೆ ಕೇವಲ 81 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 214 ರನ್ಗಳಿಂದ ಗೆದ್ದುಕೊಂಡಿತು. ಸೌಮ್ಯ ಪಾಂಡೆ 10 ಓವರ್ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರು.





