ಸುಳ್ಯ:ಸುಮಾರು ಒಂದೂವರೇ ವರ್ಷದ ಬಳಿಕ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲು ಕ್ಷಣ ಗಣನೆ ಆರಂಭವಾಗಿದೆ. ಹಲವು ಸಮಯದ ಕಾತರದ ಕಾಯುವಿಕೆಗೆ ಕೊನೆಯಾಗುತಿದೆ. ಆದರೆ ಯಾರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೂ ತೆರೆಯಾಗಿಲ್ಲ.ಕಾರಣ ಬಿಜೆಪಿ ಆಡಳಿತ ಇರುವ ನಗರ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳು ಇನ್ನೂ ಅಂತಿಮಗೊಂಡಿಲ್ಲ. ಅಧ್ಯಕ್ಷತೆ ಸಾಮಾನ್ಯ ಮಹಿಳೆಗೆ ಹಾಗೂ
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ. ಅಧ್ಯಕ್ಷರಾಗಲು ಬಿಜೆಪಿಯಿಂದ ಗೆದ್ದ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ಇದೆ. ನಗರ ಪಂಚಾಯತ್ನಲ್ಲಿ ಬಿಜೆಪಿಗೆ 14 ಮಂದಿ ಸದಸ್ಯರ ಬಲ ಇದೆ. ಇದರಲ್ಲಿ ಒಂಭತ್ತು ಮಂದಿ ಮಹಿಳಾ ಸದಸ್ಯರು ಇದ್ದಾರೆ. ಕಾಂಗ್ರೆಸ್ ಸದಸ್ಯರಲ್ಲಿ ಯಾರೂ ಮಹಿಳಾ ಸದಸ್ಯರಿಲ್ಲ. ಆದುದದರಿಂದ ಅಧ್ಯಕ್ಷತೆ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತ. ಉಪಾಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಎಲ್ಲಾ 20 ಸದಸ್ಯರಿಗೂ ಸ್ಪರ್ಧೆಗೆ ಅವಕಾಶ ಇದೆ. ಆದರೆ ಅಧ್ಯಕ್ಷತೆ ಮಹಿಳೆಗೆ ಮೀಸಲಾದ ಕಾರಣ ಉಪಾಧ್ಯಕ್ಷ ಸ್ಥಾನ ಬಿಜೆಪಿಯ 5 ಮಂದಿ ಪುರುಷ ಸದಸ್ಯರಲ್ಲಿ ಒಬ್ಬರಾಗುವುದು ಖಚಿತ.
ಅಧ್ಯಕ್ಷತೆಗೆ ಬಿಜೆಪಿ ಸದಸ್ಯರಾದ ಶಶಿಕಲಾ ನೀರಬಿದಿರೆ, ಸರೋಜಿನಿ ಪೆಲ್ತಡ್ಕ, ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಪೂಜಿತಾ, ಪ್ರವಿತಾ ಪ್ರಶಾಂತ್, ಸುಶೀಲ ಜಿನ್ನಪ್ಪ ಇವರಲ್ಲಿ ಒಬ್ಬರು ಅಧ್ಯಕ್ಷರಾಗುವುದು ಖಚಿತ. ಅದೃಷ್ಟ ಯಾರಿಗೆ ಒಲಿದು ಬರಲಿದೆ ಎಂಬುದು ಕಾದು ನೋಡಬೇಕಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಬಾಲಕೃಷ್ಣ ರೈ, ಸುಧಾಕರ, ಬುದ್ಧನಾಯ್ಕ್, ನಾರಾಯಣ ಶಾಂತಿನಗರ ಈ ಐವರಲ್ಲಿ ಯಾರು ಅಭ್ಯರ್ಥಿ ಎಂಬುದು ಇನ್ನೂ ಸಸ್ಪೆನ್ಸ್.
ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವಿನಯಕುಮಾರ್ ಕಂದಡ್ಕ, ಉಪಾಧ್ಯಕ್ಷರಾಗಿದ್ದ ಸರೋಜಿನಿ ಪೆಲ್ತಡ್ಕ ಅವರನ್ನು ಉಪಾಧ್ಯಕ್ಷ-ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಪರಿಗಣಿಸುತ್ತಾರಾ ಎಂಬ ಕುತೂಹಲ ಇದೆ.
ಇನ್ನೂ ಆಗಿಲ್ಲ ನಿರ್ಧಾರ:
ಆ.29 ರಂದು ಗುರುವಾರ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಅಂತಿಮಗೊಳಿಸಿಲ್ಲ. ಬುಧವಾರ ಪಕ್ಷದ ಕೋರ್ ಕಮಿಟಿ ಸಭೆ, ಸದಸ್ಯರ ನಡೆಸಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೀಸಲಾತಿ ಪ್ರಕಾರ ಎಲ್ಲಾ ಸದಸ್ಯರಿಗೆ ಅವಕಾಶ ಇರುವುದರಿಂದ ಮತ್ತು ಆಕಾಂಕ್ಷಿಗಳು ಹೆಚ್ಚು ಇರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಲಿದೆ. ಬುಧವಾರ ನಡೆಯುವ ಸಭೆಯಲ್ಲಿ ಸುಳ್ಯ ಮಂಡಲದ ಪ್ರಮುಖರು, ಜಿಲ್ಲಾ ಸಮಿತಿಯ ವೀಕ್ಷಕರು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಳೆದು ತೂಗಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿದ್ದಾರೆ.