ಸುಳ್ಯ:ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಯೋಜನೆ ಅಥವಾ ಕಾಮಗಾರಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚಿಸಿ, ಪರಿಶೀಲನೆ ನಡೆಸಿ ಮುನ್ನಡೆಯಿರಿ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ಸುಳ್ಯ ನಗರ ಪಂಚಾಯತ್ಗೆ ಭೇಟಿ ನೀಡಿ ನಗರ ಪಂಚಾಯತ್ನಲ್ಲಿ ಸಭೆ ನಡೆಸಿದರು. ಈ ವೇಳೆ ಸದಸ್ಯರು, ಅಧಿಕಾರಿಗಳು ವಿವಿಧ

ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ನಗರದ ಮಹಾಯೋಜನೆಗೆ ಸಂಬಂಧಿಸಿದಂತೆ ಇಲ್ಲಿನ ಭೌಗೋಳಿಕ ರೀತಿಗೆ ಅನುಗುಣವಾಗಿ ಯೋಜನೆ ರೂಪಿಸಿ ಮಂಜೂರು ಮಾಡಬೇಕು. ಇಲ್ಲವೇ ಇಲ್ಲಿ ವಿವಿಧ ಸಮಸ್ಯೆಗಳು, ಭ್ರಷ್ಟಚಾರಕ್ಕೆ ಅವಕಾಶ ನೀಡಿದಂತೆ ಆಗಲಿದೆ ಎಂದು ಪ್ರಸ್ತಾಪಿಸಿದರು. ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಥಳೀಯವಾಗಿ ಹಾಗೂ ಸರಕಾರದ ಮಾರ್ಗಸೂಚಿಯಂತೆ ಯೋಜನೆ ಜಾರಿಗೊಳಿಸಲು ಮತ್ತು ಯೋಜನೆ ಜಾರಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು. ಈ ಕುರಿತು ಸಂಬಂಧಿಸಿದವರ ಜೊತೆ ಸಭೆ ನಡೆಸಿ ಇಲ್ಲಿನ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸೋಣ ಎಂದರು. ಈ ಹಿನಲ್ಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿಸು ಸುಳ್ಯ ಶಾಸಕರು ಹಾಗೂ ನಗರ ಪಂಚಾಯತ್ ಪ್ರತಿನಿಧಿಗಳ ನಿಯೋಗ ಮುಂದಿನ ವಾರ ಯೋಜನಾ ಪ್ರಾಧಿಕಾರದ ಆಯುಕ್ತರು ಹಾಗೂ ಸಂಬಂಧಪಟ್ಟವರನ್ನು ಭೇಟಿ ಮಾಡಲು ನಿರ್ಧರಿಸಲಾಯಿತು.ಒಳಚರಂಡಿ ಯೋಜನೆ
ಅನುಷ್ಠಾನಗೊಂಡರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಸಿಬ್ಬಂದಿ ಕೊರತೆ;
ನಗರ ಪಂಚಾಯತ್ನಲ್ಲಿನ ಸಿಬ್ಬಂದಿ ಕೊರೆತ ಬಗ್ಗೆ ಸಭೆಯಲ್ಲಿ ಸದಸ್ಯರಾದ ವಿನಯಕುಮಾರ್ ಕಂದಡ್ಕ ಹಾಗೂ ಶರೀಫ್ ಕಂಠಿ ಪ್ರಸ್ತಾಪಿಸಿದರು. ಇಂಜಿನಿಯರತ, ಆರೋಗ್ಯಾಧಿಕಾರಿ, ಕಂದಾಯ ನಿರೀಕ್ಷಕರು ಪೂರ್ಣ ಪ್ರಮಾಣದಲ್ಲಿ ಇಲ್ಲದೆ ಸಮಸ್ಯೆ ಆಗಿದೆ ಎಂದು ಹೇಳಿದರು.
ಇಂಜಿನಿಯರ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನಿವೃತ್ತ ಇಂಜೀನಿಯರ್ ರನ್ನು ನೇಮಕ ಮಾಡುವಂತೆ ನಿರ್ದೇಶನ ಇದೆ ಎಂದು ತಿಳಿಸಲಾಯಿತು. ಆದರೆ ಅಂತಹವರು ಸಿಗುವುದಿಲ್ಲ ಎಂದು ಸದಸ್ಯರು, ಮುಖ್ಯಾಧಿಕಾರಿ ತಿಳಿಸಿದರು. ನ.ಪಂ.ನಲ್ಲಿನ ವಿವಿಧ ಹುದ್ದೆಗಳು ಖಾಲಿ ಇರುವ ಬಗ್ಗೆ ಎಂಎಲ್ಸಿ ಅವರ ಗಮನಕ್ಕೆ ತರಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ನ.ಪಂ.ಸದಸ್ಯರಾದ ವಿನಯಕುಮಾರ್ ಕಂದಡ್ಕ, ಶರೀಫ್ ಕಂಠಿ,ಬಾಲಕೃಷ್ಣ ರೈ, ಬುದ್ಧ ನಾಯ್ಕ್, ಸುಧಾಕರ ಕೆ, ನಾರಾಯಣ ಶಾಂತಿನಗರ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಸರೋಜಿನಿ ಪೆಲ್ತಡ್ಕ, ಪ್ರವಿತಾ ಪ್ರಶಾಂತ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಠ್ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ, ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಬಿಜೆಪಿ ನಗರ ಶಕ್ತಿ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ರವಿಚಂದ್ರ ಕೊಡಿಯಾಲಬೈಲು, ಮತ್ತಿತರರು ಉಪಸ್ಥಿತರಿದ್ದರು.









